ಶ್ರೀನಿವಾಸ ಪ್ರಸಾದ್ ರಂತವರು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯಬೇಕು: ​ನ್ಯಾ.ಸಂತೋಷ್ ಹೆಗಡೆ

Update: 2018-03-21 16:28 GMT

ಮೈಸೂರು,ಮಾ.21: ಪ್ರಸ್ತುತ ರಾಜಕಾರಣದಲ್ಲಿ ಬದಲಾವಣೆಗಳು ಆಗಬೇಕಿದ್ದು. ಆ ಬದಲಾವಣೆ ತರುವ ನಿಟ್ಟಿನಲ್ಲಿ ವಿ.ಶ್ರೀನಿವಾಸಪ್ರಸಾದ್ ಅಂತಹ ರಾಜಕಾರಣಿ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ಅಭಿಪ್ರಾಯಿಸಿದರು.

ನಗರದ ಕಲಾಮಂದಿರದಲ್ಲಿ ಬುಧವಾರ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಬರೆದಿರುವ ;ಸ್ವಾಭಿಮಾನಿ ರಾಜಕಾರಣದ ಹಿನ್ನಲೆ ನಂಜನಗೂಡು ಉಪಚುನಾವಣೆ ವಿಶ್ಲೇಷಣೆ; ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಾನು ಹಲವಾರು ರಾಜಕಾರಣಿಗಳನ್ನು ಕಂಡಿದ್ದೇನೆ. ಅವರ ಬಗ್ಗೆ ತಿಳಿದುಕೊಂಡಿದ್ದೇನೆ. ಅದರಲ್ಲಿ ಪ್ರಾಮಾಣಿಕವಾಗಿ ಹಾಗೂ ತಮ್ಮ ತತ್ವ ಸಿದ್ಧಾಂತಗಳನ್ನು ಉಳಿಸಿಕೊಂಡು ಬಂದಿರುವ ರಾಜಕಾರಣಿಗಳು ಕೆಲವರು ಮಾತ್ರ. ಅಂತಹ ರಾಜಕಾರಣಿಗಳಲ್ಲಿ ಶ್ರೀನಿವಾಸಪ್ರಸಾದ್ ಒಬ್ಬರು ಎಂದು ಹೇಳಿದರು.

ಪ್ರಸ್ತುತ ರಾಜಕಾರಣ ಬೇಸರ ಮೂಡಿಸಿದೆ. ಕಳೆದ ಚಳಿಗಾಲದ ಲೋಕಸಭಾ ಅಧಿವೇಶನ 14 ದಿನಗಳವರೆಗೆ ನಡೆಯಿತು. ಆದರೆ ಯಾವುದೇ ವಿಚಾರವೂ ಜನರಿಗಾಗಿ ಚರ್ಚೆಯಾಗಲಿಲ್ಲ. ಅಷ್ಟೂ ದಿನದ ಕಲಾಪವು ಗದ್ದಲ, ಸಭಾತ್ಯಾಗದಿಂದ ಕೂಡಿತ್ತು. ಒಂದು ದಿನ ಲೋಕಸಭಾ ಅಧಿವೇಶನದ ಖರ್ಚು 10ಕೋಟಿ ರೂ.. ಹಾಗಾದರೆ ಇಂತಹ ರಾಜಕಾರಣಿಗಳು ನಮಗೆ ಬೇಕೆ ? ಹಾಗೆಯೇ ವಿಧಾನಸಭಾ ಅಧಿವೇಶನದಲ್ಲಿ ನಾಲ್ಕು ಕರಡು ಸೂಚನೆಯನ್ನು ಮಂಡಿಸಲಾಯಿತು. ಆದರೆ ಅದರ ಚರ್ಚೆಯಲ್ಲಿ ಭಾಗವಹಿಸಿದ್ದು 22 ಮಂದಿ ಶಾಸಕರು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಲೋಕಾಯುಕ್ತ ನಾಗಿ ಕೆಲಸ ನಿರ್ವಹಿಸಿದ ಸಂದರ್ಭದಲ್ಲಿ ಗಣಿ ಹಗರಣದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಮೂವರು ಮುಖ್ಯಮಂತ್ರಿಗಳು, 8 ಜನ ಮಂತ್ರಿಗಳು, 50ಕ್ಕೂ ಹೆಚ್ಚು ಐಎಎಸ್, ಐಪಿಎಸ್ ನಂತಹ ಅಧಿಕಾರಿಗಳು, ಬಹಳಷ್ಟು ಶಾಸಕರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಇದರಿಂದ ಶ್ರೀನಿವಾಸಪ್ರಸಾದ್ ದೂರ ಇದ್ದರು. ಹಾಗಾಗಿ ಅಂತವರು ಯೋಗ್ಯರು ಎಂದು ಭಾವಿಸಿರುವುದಾಗಿ ಹೇಳಿದರು.

ರಾಜನೀತಿ ಹೋಗಿ ಪ್ರಜಾಪ್ರಭುತ್ವ ಬಂದು ರಾಜಕಾರಣ ಜನರಿಂದ ಜನರಿಗಾಗಿ ಜನರ ಸರಕಾರ ಎಂದು ನಾವುಗಳು ಭಾವಿಸಿದ್ದೇವೆ. ಆದರೆ ಕೆಲವು ರಾಜಕಾರಣಿಗಳು ಕೆಲವರಿಂದ ಕೆಲವರಿಗಾಗಿ ಕೆಲವರ ಸರಕಾರ ಎಂದು ತಿಳಿದುಕೊಂಡಿದ್ದಾರೆ. ಪ್ರಜಾಪ್ರತಿನಿದಿಗಳನ್ನು ನಾಯಕರನ್ನಾಗಿ ಕಳುಹಿಸಿದ್ದೇವೆ ಹೊರತು ಮಾಲಿಕರನ್ನಾಗಿ ಕಳುಹಿಸಿಲ್ಲ ಎಂದು ಎಚ್ಚರಿಸಿದರು.

ಇದಕ್ಕೂ ಮೊದಲು ವಿ.ಶ್ರೀನಿವಾಸಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಕಾರಣ ನಮ್ಮ ಕುಟುಂಬಕ್ಕೆ ವಿರುದ್ಧವಾಗಿ ಇತ್ತು. ಕೆಲವು ಪರಿಸ್ಥಿತಿಗಳು ನನ್ನನ್ನು ರಾಜಕಾರಣಕ್ಕೆ ಬರುವಂತೆ ಮಾಡಿತು ಎಂದು ಅವರು ರಾಜಕಾರಣಕ್ಕೆ ಬಂದ ರೀತಿ ಮತ್ತು ನಂಜನೂಡು ಉಪಚುನಾವಣೆ ಯಾವ ರೀತಿ ನಡೆಯಿತು ಎಂದು ಸಂಕ್ಷಿಪ್ತವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಪತ್ರಿಕೋದ್ಯಮಿ ಕೆ.ಬಿ.ಗಣಪತಿ, ಮುಡಾ ಮಾಜಿ ಅಧ್ಯಕ್ಷ ಕೆ.ಆರ್.ಮೋಹನ್‍ಕುಮಾರ್ ಡಾ.ನಂಜುಂಡಸ್ವಾಮಿ, ಪ್ರೊ.ನೀಲಗಿರಿ ತಳವಾರ್. ಡಾ.ಸಿ.ನಾಗಣ್ಣ, ನಂದಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News