ಚೆಲುವರಾಯಸ್ವಾಮಿ ಬೆಂಬಲಿಗರಿಂದ ಡಾಬಾ ಮಾಲಿಕನಿಗೆ ಹಲ್ಲೆ: ಆರೋಪ

Update: 2018-03-21 16:54 GMT

ನಾಗಮಂಗಲ, ಮಾ.21: ಜೆಡಿಎಸ್ ಬಂಡಾಯ ಶಾಸಕ ಎನ್. ಚೆಲುವರಾಯಸ್ವಾಮಿ ಬೆಂಬಲಿಗರು ಕ್ಷುಲ್ಲಕ ಕಾರಣಕ್ಕೆ ಡಾಬಾ ಮಾಲೀಕರ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಶ್ರೀರಾಮನಹಳ್ಳಿ ಗೇಟ್ ವೃತ್ತದಲ್ಲಿ ನಡೆದಿದೆ ಎನ್ನಲಾಗಿದೆ.

ಲಕ್ಷ್ಮಿ ಡಾಬಾದ ಮಾಲಕ ದೇವರಾಜು ಮತ್ತು ಸಹೋದರ ರೇವಣ್ಣ ಹಲ್ಲೆಗೊಳಗಾಗಿದ್ದಾರೆ. ಈ ಸಂಬಂಧ ನಾಗಮಂಗಲ ಪಟ್ಟಣದ ಪ್ರವೀಣ ಮತ್ತು ಮಹೇಶ್ ಯಾನೆ ಬಾಂಡ್ಲಿ, ಕಾಳಿ ಸೇರಿದಂತೆ 12 ಮಂದಿ ವಿರುದ್ಧ ದೇವರಾಜು ದೂರು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಮಾ.17ರ ತಡರಾತ್ರಿ ಪ್ರವೀಣ ಮತ್ತು ಸಹಚರರು ಡಾಬಾಗೆ ಬಂದು ಊಟ ಕೇಳಿದ್ದು, ರಜೆ ಇದೆಯೆಂದು ಮಾಲಕ ದೇವರಾಜು ಹೇಳಿದ್ದಾರೆ. ಈ ವಿಚಾರವಾಗಿ ವಾಗ್ವಾದ ನಡೆದು ಪ್ರವೀಣ ಮತ್ತು ಸಹಚರರು ಹೊಟೇಲ್ ಪರಿಕರಗಳನ್ನು ಹಾನಿಗೊಳಿಸಿದ್ದಾರೆ. ಮಧ್ಯಪ್ರವೇಶಿಸಿ ಸ್ಥಳೀಯರು ಮಾತುಕತೆ ನಡೆಸಿ ಪ್ರವೀಣ್ ಮತ್ತು ಸಹಚರರು ಡಾಬಾದ ಪರಿಕರಗಳ ನಷ್ಟ ಪರಿಹಾರವಾಗಿ 5 ಸಾವಿರ ರೂ. ಪಾವತಿಸುವಂತೆ ಸೂಚಿಸಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ಪ್ರವೀಣ್ ಡಾಬಾ ಮಾಲೀಕ ದೇವರಾಜು ವಿರುದ್ಧ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ಮಾ.20 ರಂದು ಸಂಜೆ ಶಾಸಕ ಚೆಲುವರಾಯಸ್ವಾಮಿ ಡಾಬಾಗೆ ಭೇಟಿ ನೀಡಿ ಮಾತುಕತೆ ನಡೆಸಿ ಹೋಗಿದ್ದಾರೆ. ಶಾಸಕರು ಹೋದ ಕೆಲವೇ ನಿಮಿಷದಲ್ಲಿ ಪ್ರವೀಣ ಮತ್ತು ಸಹಚರರು ಡಾಬಾ ಮಾಲಕ ದೇವರಾಜು, ಬಿಡಿಸಲು ಬಂದ ಸಹೋದರ ರೇವಣ್ಣನ ಮೇಲೆ ಹಲ್ಲೆ ನಡೆಸಿದರು ಎನ್ನಲಾಗಿದೆ.

ಈ ಸಂಬಂಧ ದೇವರಾಜು ಪ್ರವೀಣ್ ಮತ್ತು ಸಹಚರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಎಫ್‍ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಎಲ್ಲಾ ಘಟನೆಗಳ ದೃಶ್ಯಗಳು ಡಾಬಾದ ಸಿಸಿ ಕೆಮೆರಾದಲ್ಲಿ ದಾಖಲಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ತಾಲೂಕಿನಲ್ಲಿ ರಾಜಕೀಯ ಗಲಾಟೆಗಳು ಶುರುವಾಗಿದ್ದು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News