×
Ad

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಏನೇ ಮಾಡಿದರೂ ಕಾಂಗ್ರೆಸ್ ಗೆಲುವು ನಿಶ್ಚಿತ: ರಾಹುಲ್‍ ಗಾಂಧಿ

Update: 2018-03-21 22:51 IST

ಹಾಸನ,ಮಾ.21: ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಏನೇ ಮಾಡಿದರೂ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿಯು ರಾಜಕೀಯಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದವಾಗಿದೆ. ಬಿಜೆಪಿ ಅಧ್ಯಕ್ಷರ ವಿರುದ್ದ ಕೊಲೆ ಆರೋಪ ಇದೆ. ಆದರೆ ಕಾಂಗ್ರೆಸ್ ಬಗ್ಗೆ ಜನರು ಮತ್ತೊಂದು ಉತ್ತಮ ದೃಷ್ಠಿಯಲ್ಲಿ ನೋಡುತ್ತಿದ್ದಾರೆ. ಬಡವರ, ದುರ್ಬಲರ ಪರ ಹೋರಾಡುವ ಪಕ್ಷ ಕಾಂಗ್ರೆಸ್. ದೇಶದ ಜನತೆ ಕಾಂಗ್ರೆಸ್ ಕೊಟ್ಟ ಮಾತಿಗೆ ತಕ್ಕಂತೆ ನಡೆದಿರೋದನ್ನು ನೋಡಿದ್ದಾರೆ. ನುಡಿದಂತೆ ನಡೆ ಎಂಬ ಬಸವಣ್ಣರ ಮಾತನ್ನು ಕಾಂಗ್ರೆಸ್ ಪಾಲಿಸುತ್ತದೆ ಎಂದರು.

ಪಕ್ಷದಲ್ಲಿ ಬಸವಣ್ಣ, ನಾರಾಯಣಗುರು ರಂತಹವರ ರಕ್ತ ಹರಿಯುತ್ತಿದೆ. ಇದು ಕೇವಲ ಕಾಂಗ್ರೆಸ್ನಲ್ಲಿ ಅಷ್ಟೇ ಅಲ್ಲ. ದೇಶದ ಜನತೆಯಲ್ಲಿಯೂ ವೀರ ಪುರುಷರ ರಕ್ತ ಹರಿಯುತ್ತಿದೆ. ಸಾವಿರ ವರ್ಷಗಳ ಹಿಂದೆ ಕುರುಕ್ಷೇತ್ರ ನಡೆದಿತ್ತು. ಒಂದು ಕಡೆ ಕೌರವರ ಮತ್ತು ಪಾಂಡವರ ಸೇನೆ ನಡುವೆ ಯುದ್ದ ನಡೆದಿತ್ತು. ಕೌರವರ ಸೇನೆ ರಾಜ್ಯಕ್ಕಾಗಿ, ಪಾಂಡವರ ಸೇನೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತು. ಈ ಸಮಯದಲ್ಲಿ ಕೌರವರು ರಾಜ್ಯಕ್ಕಾಗಿ ಏನುಬೇಕಾದರೂ ಮಾಡುತ್ತಿದ್ದರು ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ಪಾಂಡವರು ನ್ಯಾಯಕ್ಕಾಗಿ ಹೋರಾಟ ಮಾಡಿರುವ ಬಗ್ಗೆ ತಿಳಿದಿದೆ. ಅದರಂತೆ ಬಿಜೆಪಿಯು ಸರಕಾರಕ್ಕಾಗಿ ಏನು ಬೆಕಾದರೂ ಮಾಡುತ್ತಿದೆ ಎಂದು ದೂರಿದರು.

ಸರ್ಕಾರ ರಚನೆಗಾಗಿ ಅರುಣಾಚಲ ಪ್ರದೇಶ, ಗೋವಾಗಳಲ್ಲಿ ಬಿಜೆಪಿ ಏನು ಬೇಕಾದರೂ ಮಾಡುತ್ತದೆ ಎಂಬುದು ಜನದಿಗೆ ತಿಳಿದಿದೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ಯಾರಿಗೆ ತೊಂದರೆಯಾದರೂ ಯಾವುದೇ ಕ್ಷಣದಲ್ಲಿ ನಾನು ಬರಲು ಸಿದ್ದನಿದ್ದೇನೆ. ನನ್ನ ಅಗತ್ಯ ನಿಮಗಿದೆ ಎನಿಸಿದರೆ ಯಾವುದೇ ಕ್ಷಣದಲ್ಲಿ ಹಾಜರಿರಲು ಸಿದ್ದ ಎಂದು ಹೇಳಿದರು.

ಅಧಿಕಾರಕ್ಕಾಗಿ ಸುಳ್ಳಿನ ಮೇಲೆ ಸುಳ್ಳು ಹೇಳಲು ಬಿಜೆಪಿ ತಯಾರಾಗಿದೆ. ಮೋದಿ ಮೊದಲು ನನಗೆ ಅಧಿಕಾರ ಕೊಡಿ ನಿಮ್ಮ ಖಾತೆಗೆ 15 ಲಕ್ಷ  ಹಾಕುತ್ತೇನೆ ಎಂದಿದ್ದರು. ಆದರೆ 15 ಲಕ್ಷ ಹೋಗಲಿ 10 ರುಪಾಯಿ ಕೂಡ ಯಾರ ಖಾತೆಗೂ ಬಂದಿರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಇಂದಿರಾ ಗಾಂದಿ ಕಷ್ಟದಲ್ಲಿದ್ದಾಗ ಕರ್ನಾಟಕದ ಜನತೆ ಕೈಹಿಡಿದದ್ದನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ. ಇದನ್ನು ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ ಎಂದು ಹೇಳಿದರು. 

ದೇಶದ ಪ್ರಧಾನಿ ಆದಾಗ ಲಕ್ಷ ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ ಅವರು ಇಂದು ಯಾವ ಉದ್ಯೋಗ ನೀಡಿದ್ದಾರೆ ? ಮೋದಿ ಬಾಯಲ್ಲಿ ಮೇಕ್ ಇನ್ ಇಂಡಿಯಾ ಅಂತಾ ಶಬ್ದ ಬರುತ್ತದೆ. ಆದರೆ ಇಂದು ಎಲ್ಲೆಲ್ಲೂ ಮೇಡ್ ಇನ್ ಚೈನಾ ವಸ್ತುಗಳು ಕಾಣುತ್ತಿದ್ದೇವೆ ಎಂದು ವ್ಯಂಗ್ಯವಾಡಿದರು. ಮೋದಿಯವರೆ ನೀವು ಕೆಲವೇ ಜನರ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ ಅಷ್ಟೆ. ಹಾಗೆ ಈ ದೇಶದ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದ್ದೆ, ಈವರೆಗೆ ಮೋದಿ ನನ್ನ ಮಾತಿಗೆ ಉತ್ತರ ಕೊಟ್ಟಿಲ್ಲ. ಆದರೆ ಕರ್ನಾಟಕದ ನಮ್ಮ ಸರಕಾರದ ಸಿಎಂ ಸಿದ್ದರಾಮಯ್ಯ ನನ್ನ ಮನವಿಗೆ ಸ್ಪಂದಿಸಿ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಡವರಿಗಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ಉಚಿತ ಅಕ್ಕಿ ಕೊಡುವ ಕೆಲಸವನ್ನು ನಮ್ಮ ರಾಜ್ಯ ಸರ್ಕಾರ ಮಾಡುತ್ತಿದೆ. ಆದರೆ ಗುಜರಾತ್‍ನಲ್ಲಿ ಶಿಕ್ಷಣ ವ್ಯಾಪಾರಿಕರಣವಾಗಿದೆ. ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ಪದವಿವರೆಗೆ ಉಚಿತ ಶಿಕ್ಷಣ ಕೊಡುತ್ತಿದ್ದೆವೆ. ರಾಜ್ಯದಲ್ಲಿ ನೀರಾವರಿಗಾಗಿ ಬಿಜೆಪಿಗಿಂತ ಮೂರುಪಟ್ಟು ಹೆಚ್ಚು ವೆಚ್ಚ ಮಾಡಿದ್ದೇವೆ. ದಲಿತರ, ಆದಿವಾಸಿಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಬದ್ದವಾಗಿದೆ. ಕರ್ನಾಟಕದಲ್ಲಿ ಬಡ ರೈತರಿಗೆ ಮೂರು ಲಕ್ಷದವರೆಗೆ ಬಡ್ಡಿ ರಹಿತ ಸಾಲ ಕೊಡಲಾಗಿದೆ. ಆದರೂ ಪ್ರಧಾನಿ ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಹೀಗೆ ಪ್ರಧಾನಿ ಮಾತನಾಡುವಾಗ ಅವರದೇ ವೇದಿಕೆಯಲ್ಲಿರುವ ಜೈಲಿಗೆ ಹೋಗಿ ಬಂದ ಓರ್ವ ಸಿಎಂ, ಭ್ರಷ್ಟಾಚಾರದ ಆರೋಪದಲ್ಲಿ ಸ್ಥಾನ ಕಳೆದುಕೊಂಡ ನಾಲ್ವರು ಮಾಜಿ ಸಚಿವರನ್ನು ಮರೆತು ಬಿಡುತ್ತಾರೆ ಎಂದು ಕಿಡಿಕಾರಿದರು.

ಬಿಜೆಪಿ ಅಧಿಕಾರಕ್ಕೆ ತರಬೇಕೆಂದು ಅವರು ನಿರ್ಧಾರ ಮಾಡಿದ್ದಾರೆ. ಹಿಂಬಾಗಿಲಿನಿಂದ ಬಿಜೆಪಿಗೆ ಸಹಾಯ ಮಾಡಿದರೆ ಗೊತ್ತಾಗಲ್ಲ ಎಂದು ಜೆಡಿಎಸ್ ಗೆ ತಿಳಿದಿದೆ. ಆರೆಸ್ಸೆಸ್ಸ್ ನ ಈ ಟೀಂ, ಬಿ.ಟಿಂ, ಸಿ ಟೀಂ ಯಾರೇ ಬಂದರೂ ನಮ್ಮ ಗೆಲುವು ತಡೆಯೋಕೆ ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ದಲಿತರು, ಆದಿವಾಸಿಗಳ, ಮಹಿಳೆಯರು, ವಿದ್ಯಾರ್ಥಿಗಳ ಏಳಿಗೆ ಆಗಬೇಕಾದರೆ ಅದು ಕಾಂಗ್ರೆಸ್‍ ನಿಂದ ಮಾತ್ರ ಸಾದ್ಯ. ಕಪ್ಪು ಹಣವನ್ನು ಬಿಳಿ ಮಾಡಲು ಹೋಗಿ ಮೋದಿ ಅವರು ಜನರಿಗೆ ಸಂಕಷ್ಟ ತಂದಿಟ್ಟರು. ಮೋದಿ ಸಹಾಯದಿಂದ ನೀರವ್ ಮೋದಿ ಸೇರಿ ಹಲವರು ಲಕ್ಷಕೋಟಿ ಹಣ ಲೂಟಿಮಾಡಿ ವಿದೇಶಕ್ಕೆ ಹೋಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆ ಸಂದರ್ಭದಲ್ಲಿ ಹಾಸನದ ಎಲ್ಲಾ ಕ್ಷೇತ್ರಗಳಿಗೂ ಬರುತ್ತೇನೆ. ಚುನಾವಣೆಯಲ್ಲಿ ಮತದಾರರು ಅತ್ಯಂತ ಜಾಗರೂಕತೆಯಿಂದ ಮತ ಹಾಕಬೇಕು. ದೇಶದಲ್ಲಿ ಜಾತ್ಯಾತೀತ ತತ್ವಕ್ಕೆ ಬದ್ಧವಾಗಿರುವ ಪಕ್ಷ ಜೆಡಿಎಸ್‍ನವರು ಕೋಮುವಾದ ವಿರೋಧ ಮಾಡುತ್ತಾರೆ ಎಂದು ಕೊಳ್ಳಲಾಗಿತ್ತು. ಆದರೆ ಅವರು ಆ ರೀತಿ ನಡೆದುಕೊಂಡಿಲ್ಲ. ಇದನ್ನು ರಾಜ್ಯದ ಇತಿಹಾಸ ಹೇಳುತ್ತದೆ. 2006 ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಬೇಕು ಅನ್ನೋ ಒಂದೇ ಕಾರಣಕ್ಕೆ ಕೋಮುವಾದಿಗಳ ಜೊತೆ ಸೇರಲಾಗಿತ್ತು ಎಂದು ದೂರಿದರು.

ಜೆಡಿಎಸ್‍ನವರು ಕೋಮುವಾದ ವಿರೋಧಿಸೋದು ಕೇವಲ ರಾಜಕೀಯಕ್ಕಾಗಿ ಮಾತ್ರ. ಅದು ಅವರ ಬದ್ಧತೆ ಅಲ್ಲ. ಜೆಡಿಎಸ್‍ನವರು ಸ್ವಂತ ಬಲದಿಂದ ಅಧಿಕಾರಕ್ಕೆ ಖಂಡಿತಾ ಬರಲ್ಲ ಎನ್ನುವುದು ದೇವೇಗೌಡರು ಸೇರಿ ಎಲ್ಲರಿಗೂ ಗೊತ್ತು. ಆದರೂ ನಾವು ಕಿಂಗ್ ಮೇಕರ್ ಆಗ್ತೇವೆ ಅಂತ ಉಯಿಲೆಬ್ಬಿಸುತ್ತಿದ್ದಾರೆ. ಜೆಡಿಎಸ್ ನವರು ಅವಕಾಶವಾದಿಗಳು. ಅವರನ್ನು ನಂಬಲು ಯಾರು ಹೋಗಬೇಡಿ. ಐದಾರು ಜಿಲ್ಲೆ ಬಿಟ್ಟರೆ ಬೇರೆ ಜಿಲ್ಲೆಗಳಲ್ಲಿ ಅಸ್ತಿತ್ವ ಇಲ್ಲ. ಹಾಗಾಗಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ. ಹಾಸನದವರು ಜೆಡಿಎಸ್ ಬೆಂಬಲಿಸಿದ್ರೆ ಪರೋಕ್ಷವಾಗಿ ಬಿಜೆಪಿ ಬೆಂಬಲಿಸಿದಂತೆ ಎಂದು ಹೇಳಿದರು.

ಸಿಎಂ ಆದ 24 ಗಂಟೆಗಳಲ್ಲಿ ಸಾಲ ಮನ್ನಾ ಮಾಡುತ್ತೇನೆ ಅಂತ ಕುಮಾರಸ್ವಾಮಿ ಹೇಳುತ್ತಿದ್ದಾರೆ, ಆದರೆ ಅವರು ಸಿಎಂ ಆದ್ದಾಗ, ಅವರ ತಂದೆ ಸಿಎಂ ಆಗಿದ್ದಾಗ ಏಕೆ ಮಾಡಲಿಲ್ಲ? ಎಂದು ಪ್ರಶ್ನೆ ಮಾಡಿದರು.

ಸಿಎಂ ಸಿದ್ದರಾಮಯ್ಯ ನೇರ ಪ್ರಶ್ನೆ: ದಲಿತರನ್ನು, ಮುಸ್ಲಿಮರನ್ನು ಡಿಸಿಎಂ ಮಾಡುತ್ತೇವೆ ಅಂತಿದ್ದಾರೆ, ಆದರೆ ದಲಿತರನ್ನು ಸಿಎಂ ಮಾಡುತ್ತೇವೆ ಎಂದು ದೇವೇಗೌಡರು ಹೇಳಲಿ ಎಂದು ಸವಾಲು ಹಾಕಿದರು. ಮಗನನ್ನು ಸಿಎಂ ಮಾಡೋದು ದೇವೇಗೌಡರ ಕೊನೆ ಆಸೆ ಎಂದು ವ್ಯಂಗ್ಯವಾಡಿದರು. ಹಾಸನದಲ್ಲಿ 7 ಕ್ಕೆ 7 ಸ್ಥಾನ ಗೆಲ್ಲಿಸಿದ್ರೆ ನೀವು ಇತಿಹಾಸ ಬರೆಯುತ್ತೀರಿ. ಜೆಡಿಎಸ್‍ನವರು ಸುಳ್ಳು ಹೇಳಿ ಜನರ ಮೋಸ ಮಾಡಲು ಆಗುವುದಿಲ್ಲ. ಮತ್ತೊಂದು ಕಡೆ  ಯಡಿಯೂರಪ್ಪ ಅವರು ನಾನೇ ಸಿಎಂ ಎನ್ನುತ್ತಿದ್ದಾರೆ. ಬಿಜೆಪಿ 150 ಮಿಶನ್ ಮಾತು ಈಗ 50 ಕ್ಕೆ ಇಳಿದಿದೆ. ಬಿಜೆಪಿಯವರು ಏನೇ ತಂತ್ರಗಾರಿಕೆ ಮಾಡಲಿ, ಕುಮಾರಸ್ವಾಮಿ ಭ್ರಮೆಯಲ್ಲಿರಲಿ, ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಎಸ್.ಆರ್. ಪಾಟೀಲ್, ಮಾಜಿ ಸಿಎಂ ವೀರಪ್ಪಮೊಯ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಹರಿಪ್ರಸಾದ್, ವಿಷ್ಣು ಪ್ರಕಾಶ್, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜು, ಎಸ್.ಎಂ. ಆನಂದ್, ವಕ್ಪ್ ಸಲಹಾ ಮಂಡಳಿ ಅಧ್ಯಕ್ಷ ಪರ್ವಿಸ್ ಪಾಷ, ಲಲಿತಮ್ಮ ಇತರರು ಪಾಲ್ಗೊಂಡಿದ್ದರು. 

ಇಂಧಿರಾ ಕ್ಯಾಂಟಿನ್ ಉದ್ಘಾಟಿಸಿದ ರಾಹುಲ್‍ಗಾಂಧಿ
ನಗರದ ಸಂತೇಪೇಟೆ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟಿನನ್ನು ಉದ್ಘಾಟಿಸಿದ ರಾಹುಲ್‍ಗಾಂಧಿ, ನಂತರ ಉಪ್ಪಿಟ್ಟು ಮತ್ತು ಇಡ್ಲಿ ಸೇವಿಸಿದರು. ಇವರಿಗೆ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಮೊದಲಾದವರು ಸಾಥ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News