ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಸರಕಾರದ ಧ್ಯೇಯ: ಸಚಿವ ಟಿ.ಬಿ.ಜಯಚಂದ್ರ

Update: 2018-03-21 18:14 GMT

ತುಮಕೂರು,ಮಾ.21: ಸರ್ವರಿಗೂ ಸಮಪಾಲು-ಸಮಬಾಳು ಧ್ಯೇಯದೊಂದಿಗೆ ಕಾರ್ಯಕ್ರಮವನ್ನು ರೂಪಿಸಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಹೆಗ್ಗಳಿಕೆ ಸರಕಾರದ್ದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ನಗರದ ಬಾಲಭವನದಲ್ಲಿಂದು ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ವಿವಿಧ ಸಲವತ್ತು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಸರಕಾರ ತೆರಿಗೆ ಸಂಗ್ರಹದಲ್ಲಿ ಶಿಸ್ತು ಪ್ರದರ್ಶಿಸಿ, ಸರಕಾರಕ್ಕೆ ಆದಾಯವನ್ನು ಹೆಚ್ಚಿಸಿದ್ದಲ್ಲದೆ ಆದಾಯದ ಸದ್ಬಳಕೆಗಾಗಿ ಉತ್ತಮ ಯೋಜನೆಗಳನ್ನು ರೂಪಿಸಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ರಾಜ್ಯ ಸರಕಾರದ್ದು. ಸರಕಾರದ ಆದೇಶದಂತೆ ಪೌರ ಕಾರ್ಮಿಕರು ಹಾಗೂ ಅಲೆಮಾರಿ ಕುಟುಂಬ, ಕಡುಬಡವರಿಗೆ ಸ್ವಂತ ನಿವೇಶನವನ್ನು ಮಂಜೂರು ಮಾಡಲಾಗಿದೆ. ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಉತ್ತಮ ಮನೆಗಳನ್ನು ದಿಬ್ಬೂರಿನಲ್ಲಿ ನಿರ್ಮಾಣ ಮಾಡಲಾಗಿದ್ದು, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದರು.

ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಎಲ್ಲ ವರ್ಗದವರಿಗೆ ಅನುಕೂಲವಾಗುವಂತಹ ಅನ್ನಭಾಗ್ಯ, ಸಾಲಮನ್ನಾದಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ. ತುಮಕೂರು ನಗರ ಕ್ಷೇತ್ರದ ಅಭಿವೃದ್ಧಿಗಾಗಿ 1200 ಕೋಟಿ ಅನುದಾನವನ್ನು ಸರಕಾರ ನೀಡಿದ್ದು, ವಿವಿಧ ಜನಪರ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಮಾತನಾಡಿ ಅಲೆಮಾರಿಗಳಿಗೆ ನಿವೇಶನ ಕಲ್ಪಿಸುವುದಕ್ಕಾಗಿ ತುಮಕೂರು, ಗುಬ್ಬಿ, ತಿಪಟೂರು, ತುರುವೇಕೆರೆ, ಚಿ.ನಾ.ಹಳ್ಳಿ, ಕೊರಟಗೆರೆ, ಪಾವಗಡ ತಾಲೂಕುಗಳಲ್ಲಿ ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಒಟ್ಟು 395 ವಿವಿಧ ಅಲೆಮಾರಿ ಸಮುದಾಯಗಳಿಗೆ ಸ್ವಂತ ನಿವೇಶನ ಸಿಗಲಿದೆ ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗಾಗಿ ಗುಬ್ಬಿ ತಾಲೂಕಿನಲ್ಲಿ 1 ಎಕರೆ, ಚಿನಾಹಳ್ಳಿ ದಬ್ಬೇಘಟ್ಟದಲ್ಲಿ 1 ಎಕರೆ, ಪಾವಗಡದಲ್ಲಿ 2 ಎಕರೆ, ತಿಪಟೂರಿನಲ್ಲಿ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ. ತುಮಕೂರು ತಾಲೂಕು ಹೆಬ್ಬಾಕದಲ್ಲಿ ಪೌರ ಕಾರ್ಮಿಕರಿಗಾಗಿ ನಿವೇಶನ ಒದಗಿಸಲು 15 ಎಕರೆ ಭೂಮಿ ಗುರುತಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದಾಗಿ 621 ಪೌರ ಕಾರ್ಮಿಕರಿಗೆ ನಿವೇಶನ ದೊರಕುತ್ತದೆ ಎಂದು ಅವರು ತಿಳಿಸಿದರು.

ಪೌರ ಕಾರ್ಮಿಕರಿಗಾಗಿ ಗುರುತಿಸಿರುವ ಜಾಗದಲ್ಲಿ ಮೂಲಸೌಕರ್ಯವನ್ನು ಕಲ್ಪಿಸಿ ಮನೆ ನಿರ್ಮಾಣ ಮಾಡುವುದಕ್ಕಾಗಿ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಅನುದಾನ ಪಡೆಯಲು ಪತ್ರ ಬರೆಯಲಾಗಿದೆ. ಮಾರಿಯಮ್ಮ ನಗರದ ಸ್ಲಂ ನಿವಾಸಿಗಳಿಗೆ ಜಿ+3 ಮಾದರಿ ಮನೆಗಳನ್ನು ಸ್ಮಾರ್ಟ್‍ಸಿಟಿ ಯೋಜನೆಯೊಂದಿಗೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ನುಡಿದ್ದಂತೆ ನಡೆದಿದ್ದೇವೆ 'ನವ ತುಮಕೂರು ನಿರ್ಮಾಣ' ಹಾಗೂ ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರವಾರು ಪ್ರಗತಿ ಸಾಧನೆ ಪುಸ್ತಕಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ,ಶಾಸಕ ಡಾ.ರಫೀಕ್ ಅಹಮದ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಬಿಡುಗಡೆಗೊಳಿಸಿದರು.

ಅದೇ ರೀತಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಭಿತ್ತಿಪತ್ರ ಹಾಗೂ ಸಂವೇದನೆ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಅಲೆಮಾರಿ ಸಮುದಾಯಗಳಿಗೆ ಸಾಂಕೇತಿಕವಾಗಿ ನಿವೇಶನ ಹಕ್ಕುಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ  ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ದೇವರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಪಾಲಿಕೆ ಆಯುಕ್ತರಾದ ಮಂಜುನಾಥ್‍ಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್‍ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News