ಜನಸಾಮಾನ್ಯರಲ್ಲಿ ಆತಂಕದ ಭೀತಿ ಉಂಟಾಗಿದೆ: ಪ್ರೊ.ಜಿ.ಕೆ.ಗೋವಿಂದರಾವ್

Update: 2018-03-21 18:39 GMT

ಮಂಡ್ಯ, ಮಾ.21: ದೇಶದ ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಜನಸಾಮಾನ್ಯರಲ್ಲಿ ಆತಂಕದ ಭೀತಿ ಉಂಟಾಗಿದೆ. ತುರ್ತು ಪರಿಸ್ಥಿತಿ ಘೋಷಿಸದೆ, ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ ಎಂದು ವಿಚಾರವಾದಿ ಹಾಗೂ ನಟ ಪ್ರೊ.ಜಿ.ಕೆ.ಗೋವಿಂದರಾವ್ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ದೇಶದ ರಾಜಕೀಯ ಹಾಗೂ ಕೋಮುವಾದಿ ವಿಷಯ ಕುರಿತು ಬುಧವಾರ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಜನರಲ್ಲಿ ನಿಶ್ಚಿಂತತೆ ಮನೋಭಾವ ಇಲ್ಲದಂತಾಗಿದೆ ಎಂದರು.

ಗುಜರಾತ್‍ನಲ್ಲಿ ಹತ್ಯಾಕಾಂಡ ನಡೆದ ಮೇಲೆ ಇಂತಹ ವಾತಾವರಣ ನಿರ್ಮಾಣವಾಗಿದೆ. ದಿನನಿತ್ಯ ಸ್ವಾತಂತ್ರ್ಯ, ಧೈರ್ಯದಿಂದ ಬದುಕುವ ಮನೋಭಾವನೆ ಇಲ್ಲದಂತಾಗಿದೆ. ಮನುಷ್ಯರು ಆಸೆ, ಕನಸುಗಳನ್ನು ಹಿಡಿದಿಟ್ಟುಕೊಳ್ಳುವ ಸ್ಥಿತಿ ಎದುರಾಗಿದೆ ಎಂದು ಅವರು ಕಿಡಿಕಾರಿದರು.

ಹಾಲಿ ಪ್ರಧಾನಿ ಮಾಜಿ ಪ್ರಧಾನಿಯ ಬಗ್ಗೆ ಬೇಜವಾಬ್ಧಾರಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ನರೇಂದ್ರಮೋದಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಅವರು, ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಸ್ವಾತಂತ್ರ್ಯದ ಪ್ರಶ್ನೆ ಎದುರಾಗಿತ್ತು. ಆದರೆ, ಪ್ರಸ್ತುತ ಜನಸಾಮಾನ್ಯರ ಬದುಕಿನ ಪ್ರಶ್ನೆ ಎದುರಾಗಿದೆ ಎಂದರು.

ಮಠದ ಸ್ವಾಮೀಜಿಗಳು ಮಠದಲ್ಲಿರಬೇಕು. ರಾಜಕೀಯದಲ್ಲಿ ತಲೆ ಹಾಕುವ ಮೂಲಕ ಜನರನ್ನು ಜಾತಿ, ಧರ್ಮಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡಬಾರದು. ಕೆಲವು ಮಠಗಳು ಮಾತ್ರ ಜನಸಾಮಾನ್ಯರ ಮಠಗಳಾಗಿದ್ದು, ಉಳಿದವು ಮುಚ್ಚಿ ಹೋದರೂ ದೇಶಕ್ಕೇನು ನಷ್ಟವಿಲ್ಲ ಎಂದು ಗೋವಿಂದರಾವ್ ಅಭಿಪ್ರಾಯಪಟ್ಟರು.

ಆಸೆ, ಆಮಿಷ, ಜಾತಿಗೆ ಸೀಮಿತವಾಗದೆ ಜವಾಬ್ಧಾರಿಯಿಮದ ಜನರು ಮತ ಚಲಾಯಿಸಬೇಕು. ಮೂಢನಂಬಿಕೆಗಳನ್ನು ತಿರಸ್ಕರಿಸಿ ವೈಜ್ಞಾನಿಕವಾಗಿ ಚಿಂತಿಸಬೇಕು. ಮೊಬೈಲ್ ಬಳಕೆ ದುರುಪಯೋಗವಾಗಬಾರದು ಎಂದು ಅವರು ಸಲಹೆ ನೀಡಿದರು.

ರಾಜ್ಯದಲ್ಲಿ ಉಂಟಾಗಿರುವ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದ ಬಗ್ಗೆ ಚರ್ಚೆ ಬೇಡ. ಧರ್ಮ ಸೃಷ್ಟಿಸಲು ಹೊರಟಿರುವವರನ್ನೇ ಕೇಳಬೇಕು. ಧರ್ಮಕ್ಕೂ ಧಾರ್ಮಿಕತೆಗೂ ವ್ಯತ್ಯಾಸವಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಕೆರಗೋಡು, ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಂಜುನಾಥ್ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯ ಬಿ.ಪಿ.ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News