ಖಾಸಗಿ ಆಸ್ಪತ್ರೆಗಳ ಸುಲಿಗೆ

Update: 2018-03-22 04:19 GMT

ವೈದ್ಯಕೀಯ ಎಂಬುದು ಒಂದು ಕಾಲದಲ್ಲಿ ಸೇವೆ ಎಂದು ಪರಿಗಣಿಸಲ್ಪಡುತ್ತಿತ್ತು. ರೋಗಿಯ ಆರೋಗ್ಯ ಕಾಳಜಿಯೇ ಆ ದಿನಗಳಲ್ಲಿ ಮೊದಲ ಆದ್ಯತೆಯಾಗಿತ್ತು. ಆಗ ಆಧುನಿಕ ವೈದ್ಯಕೀಯ ತಪಾಸಣಾ ಯಂತ್ರಗಳು ಹಾಗೂ ಉಪಕರಣಗಳು ಇರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮಾತ್ರವಲ್ಲ, ನಗರದ ಜನಸಾಮಾನ್ಯರು ವಾಸಿಸುವ ಪ್ರದೇಶದಲ್ಲಿ ಕೂಡಾ ವೈದ್ಯರು ರೋಗಿಯ ಕೈಹಿಡಿದು ನಾಡಿಯನ್ನು ನೋಡಿ ಔಷಧಿ ಕೊಡುತ್ತಿದ್ದರು. ಈಗಲೂ ಅಲ್ಲಲ್ಲಿ ಅಂತಹ ವೈದ್ಯರು ಇದ್ದಾರೆ. ಆದರೆ, ಅಂತಹವರ ಸಂಖ್ಯೆ ತುಂಬಾ ಕಡಿಮೆ. ವೈದ್ಯಕೀಯ ವ್ಯವಸ್ಥೆ ಈಗ ಮುಂಚಿನಂತಿಲ್ಲ. ಅದು ಈಗ ಸೇವೆಯಾಗಿ ಉಳಿದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣವನ್ನು ವಸೂಲಿ ಮಾಡುತ್ತಾರೆಂದು ಸರಕಾರಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ರೋಗಿಗಳಿಗೆ ಗುಣಮಟ್ಟದ ಸೇವೆ ದೊರಕುವುದಿಲ್ಲ. ಗ್ರಾಮೀಣ ಪ್ರದೇಶದ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರೇ ಇರುವುದಿಲ್ಲ ಎಂಬ ದೂರುಗಳು ಇವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ದುಬಾರಿ ಖರ್ಚನ್ನು ನಿಭಾಯಿಸಲು ಜನಸಾಮಾನ್ಯರಿಗೆ ಸಾಧ್ಯವಾಗುವುದಿಲ್ಲ. ಆದರೆ, ಎಷ್ಟು ದುಬಾರಿ ಎಂಬುದನ್ನು ನೋಡಿದರೆ ಆತಂಕ ಉಂಟಾಗುತ್ತದೆ. ಇತ್ತೀಚೆಗೆ ದೇಶದ ರಾಜಧಾನಿ ಸುತ್ತಮುತ್ತಲ ಪ್ರದೇಶದಲ್ಲಿ ಕೆಲ ಆಸ್ಪತ್ರೆಗಳಲ್ಲಿ ಡೆಂಗ್ ಕಾಯಿಲೆಗಳಿಗಾಗಿ 15 ದಿನಗಳ ಚಿಕಿತ್ಸೆಗೆ 10 ರಿಂದ 18 ಲಕ್ಷ ರೂ. ವಸೂಲಿ ಮಾಡಿದ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಔಷಧಿ ಬೆಲೆ ನಿಯಂತ್ರಣ ಪ್ರಾಧಿಕಾರವು ಅಲ್ಲಿನ ನಾಲ್ಕು ಖಾಸಗಿ ಆಸ್ಪತ್ರೆಗಳ ಬಿಲ್ಲುಗಳನ್ನು ತಪಾಸಣೆಗೆ ಒಳಪಡಿಸಿತು. ಈ ತಪಾಸಣೆಯಲ್ಲಿ ಕಂಡುಬಂದ ಅಂಶಗಳು ಆತಂಕಕಾರಿಯಾಗಿವೆ. ವೈದ್ಯಕೀಯ ಸೇವೆ ಎಂಬುದು ಹಣ ಮಾಡುವ ದಂಧೆಯಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಲಾಭದ ಪ್ರಮಾಣ ಎಷ್ಟಿರಬಹುದು. ಶೇ.20ರಿಂದ ಶೇ.30ರಷ್ಟಿದ್ದರೆ ಗಾಬರಿಯಾಗಬೇಕಿಲ್ಲ. ಆದರೆ, ಈ ಆಸ್ಪತ್ರೆಗಳ ಲಾಭದ ಪ್ರಮಾಣ ಶೇ.200ರಿಂದ 300ರಷ್ಟಿದೆ. ಈ ವರದಿಯ ಪ್ರಕಾರ 13 ರೂ. ಬೆಲೆಯ ಒಂದು ಇಂಜೆಕ್ಷನ್‌ಗೆ ಖಾಸಗಿ ಆಸ್ಪತ್ರೆಯೊಂದು 190 ರೂ. ವಸೂಲಿ ಮಾಡುತ್ತಿದೆ. ಅದರ ಜೊತೆಗೆ ಕೈಗವಸು, ಸಿರಿಂಜ್, ಗ್ಲೂಕೋಸ್ ನೀಡಲು ಬಳಸುವ ಐವಿ ಸೆಟ್, ಸಲಾಯನ್, ಇಸಿಜಿ ಇಂಜೆಕ್ಷನ್ ಇವೆಲ್ಲವುಗಳ ಬೆಲೆ ತುಂಬಾ ದುಬಾರಿಯಾಗಿದೆ.

ಸಾಮಾನ್ಯವಾಗಿ ಆಸ್ಪತ್ರೆಗಳು ನೀಡುವ ಬಿಲ್ಲುಗಳಲ್ಲಿ ಔಷಧಿ ವೈದ್ಯಕೀಯ ಉಪಕರಣಗಳು ಮತ್ತು ಚಿಕಿತ್ಸೆಯ ವೆಚ್ಚದ ಜೊತೆಗೆ ರೋಗ ನಿರ್ಣಯದ ಶುಲ್ಕಗಳು, ಇತರ ಆಸ್ಪತ್ರೆಯ ಶುಲ್ಕಗಳು ವೈದ್ಯಕೀಯ ನಿಯಂತ್ರಣ ಪ್ರಾಧಿಕಾರಕ್ಕೆ ಒಳಪಡುವುದಿಲ್ಲ. ಇದನ್ನು ತಮಗೆ ಬೇಕಾದಂತೆ ಆಸ್ಪತ್ರೆಗಳೇ ನಿಗದಿಪಡಿಸುತ್ತವೆ. ಅದೇ ರೀತಿ ಕೆಲವು ಔಷಧಿಗಳು ಮಾತ್ರ ಔಷಧಿ ನಿಯಂತ್ರಣ ಪ್ರಾಧಿಕಾರಕ್ಕೆ ಒಳಪಡುತ್ತವೆ. ಇನ್ನುಳಿದ ಔಷಧಿಗಳು ಮುಕ್ತದರಗಳನ್ನು ಹೊಂದಿರುತ್ತವೆ. ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿದು ಅವುಗಳ ಮೇಲೆ ಮುದ್ರಿಸುವ ಬೆಲೆಯನ್ನು ಕೂಡಾ ಕಂಪೆನಿಯವರೇ ಮನಸ್ಸಿಗೆ ಬಂದಂತೆ ನಿಗದಿ ಪಡಿಸಿರುತ್ತಾರೆ. ಈ ಆಸ್ಪತ್ರೆಗಳಲ್ಲಿ ಅಂತಹ ದುಬಾರಿ ಔಷಧಿಗಳನ್ನೇ ಬರೆದು ಕೊಡುತ್ತಾರೆ. ಒಮ್ಮೆ ಮಾತ್ರ ಬಳಸುವ ಸಿರಿಂಜ್‌ಗಳಲ್ಲಿ ಶೇ.130ರಷ್ಟು ಗ್ಲೂಕೋಸ್ ನೀಡಲು ಬಳಸುವ ಐವಿ ಸೆಟ್‌ಗಳಲ್ಲಿ ಶೇ.2000ದಷ್ಟು ಆಸ್ಪತ್ರೆಗಳು ಸುಲಿಗೆ ಮಾಡುತ್ತವೆ. ಐವಿ ಸೆಟ್‌ಗಳ ತಯಾರಕರು ವಿತರಕರಿಗೆ ರೂ. 5.20 ನೀಡಿದರೆ ಆಸ್ಪತ್ರೆಗಳು 8.40 ಪೈಸೆಗೆ ಅದನ್ನು ನೀಡುತ್ತವೆ. ಇದನ್ನು ರೋಗಿಗಳಿಗೆ ಆಸ್ಪತ್ರೆಗಳು 115 ರೂ.ವಸೂಲಿ ಮಾಡುತ್ತವೆ. ಇದರಲ್ಲಿ ಲಾಭದ ಪ್ರಮಾಣ ಶೇ.2000ಕ್ಕಿಂತ ಹೆಚ್ಚಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದು ಆಸ್ಪತ್ರೆಗಳು ರೋಗಿಗಳಿಂದ ಮಾಡುವ ಲೂಟಿ ಅಲ್ಲದೆ ಬೇರೇನೂ ಅಲ್ಲ. ಇನ್ನು ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಪರೀಕ್ಷೆಗಾಗಿ ದುಬಾರಿ ಶುಲ್ಕವನ್ನು ನಿಗದಿ ಪಡಿಸುತ್ತದೆ. ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ತಯಾರಿಸುವ ಕಂಪೆನಿಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿ ಆಸ್ಪತ್ರೆಗಳಿಗೆ ಹೆಚ್ಚಿನ ಲಾಭವಾಗುವಂತೆ ನೋಡಿಕೊಳ್ಳುತ್ತವೆ. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಉತ್ಪಾದಕರಿಂದ ಕಡಿಮೆ ಬೆಲೆಗೆ ಔಷಧಿ ತಂದು ತಮ್ಮದೇ ಔಷಧಿ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತವೆ ಎಂದು ಔಷಧಿ ನಿಯಂತ್ರಣ ಪ್ರಾಧಿಕಾರ ತನ್ನ ವರದಿಯಲ್ಲಿ ಹೇಳಿದೆ.

ಖಾಸಗಿ ಆಸ್ಪತ್ರೆಗಳು ಎಷ್ಟು ಅಮಾನವೀಯವಾಗಿವೆಯೆಂದರೆ 2017ನೇ ಇಸವಿಯಲ್ಲಿ ದಿಲ್ಲಿಯ ಸಮೀಪದ ಗುರುಗ್ರಾಮದ ಆಸ್ಪತ್ರೆಯೊಂದರಲ್ಲಿ 7 ವರ್ಷದ ಬಾಲಕಿಯೊಬ್ಬಳು ಸಾವಿಗೀಡಾದ್ದನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಬಾಲಕಿ ಉಳಿಯುವುದಿಲ್ಲ ಎಂದು ತಿಳಿದ ನಂತರವೂ ವೈದ್ಯರು ಅನವಶ್ಯವಾಗಿ ಆಕೆಯನ್ನು ತುರ್ತು ಚಿಕಿತ್ಸಾ ಘಟಕದಲ್ಲಿ 15 ದಿನ ಇರಿಸಿ ಚಿಕಿತ್ಸೆಯ ಸಮಯದಲ್ಲಿ 600 ಸಿರಿಂಜ್ ಹಾಗೂ 2,700 ಕೈಗವಸುಗಳನ್ನು ಬಳಸಿರುವುದಾಗಿ ಶುಲ್ಕ ವಿಧಿಸಿ ಒಟ್ಟು 18 ಲಕ್ಷ ರೂ. ವಸೂಲಿ ಮಾಡಿದ ಸಂಗತಿ ಬಯಲಿಗೆ ಬಂದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಕೇಂದ್ರ ಆರೋಗ್ಯ ಸಚಿವರು ತನಿಖೆಗೆ ಆದೇಶ ನೀಡಿದರು. ತನಿಖೆ ನಡೆದಾಗ ದಿಲ್ಲಿಯ ಇತರ ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಘಟನೆಗಳು ನಡೆದ ವರದಿಗಳು ಬಂದವು. ಕರ್ನಾಟಕದ ಅನೇಕ ನಗರಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಸುಲಿಗೆ ನಡೆಯುತ್ತಲೇ ಇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಿಗೆ ‘‘ಯಾವುದೇ ಆಸ್ಪತ್ರೆಯಲ್ಲಿ ಹಣ ಕೊಟ್ಟಿಲ್ಲ ಎಂದು ರೋಗಿಯ ಪಾರ್ಥಿವ ಶರೀರವನ್ನು ಕೊಡದಿದ್ದರೆ ಉಗ್ರಕ್ರಮ ಕೈಗೊಳ್ಳಲಾಗುವುದು’’ಎಂದು ಎಚ್ಚರಿಸಿದರು.

 ಕರ್ನಾಟಕದಲ್ಲಿ ಇಂತಹ ಖಾಸಗಿ ಆಸ್ಪತ್ರೆಗಳು ಸಾಕಷ್ಟಿವೆ. ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬಿಲ್ ವಸೂಲಿ ಮಾಡುವುದು ಮಾತ್ರವಲ್ಲ, ಕೆಲವು ಕಡೆ ರೋಗಿ ಮೃತಪಟ್ಟ ನಂತರವೂ ತುರ್ತು ಚಿಕಿತ್ಸಾ ಘಟಕದಲ್ಲಿ ಇಟ್ಟುಕೊಂಡು ಹಣ ಕಟ್ಟದೆ ಶವವನ್ನು ಕೊಡುವುದಿಲ್ಲ ಎಂದು ಕಿರಿಕಿರಿ ಉಂಟುಮಾಡಿದ ಪ್ರಸಂಗಗಳೂ ಇವೆ. ಇದನ್ನು ತಡೆಯಲೆಂದೇ ಸರಕಾರ ಖಾಸಗಿ ಆಸ್ಪತ್ರೆ ನಿಯಂತ್ರಣ ಮಸೂದೆಯೊಂದನ್ನು ತಂದಿತ್ತು. ಇದರ ವಿರುದ್ಧ ಖಾಸಗಿ ಆಸ್ಪತ್ರೆಗಳು ದೊಡ್ಡ ಹೋರಾಟವನ್ನೇ ಮಾಡಿದ್ದವು. ಕೊನೆಗೆ ಸರಕಾರ ಖಾಸಗಿ ವೈದ್ಯಕೀಯ ಲಾಬಿಗೆ ಮಣಿದು ಕೆಲ ತಿದ್ದುಪಡಿಗಳೊಂದಿಗೆ ಈ ಮಸೂದೆಗೆ ಕಾನೂನಿನ ಸ್ವರೂಪವನ್ನು ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರ ಮೇಲೂ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ನಿರಂತರವಾಗಿ ಒತ್ತಡ ಇರುತ್ತದೆ. ಬೇಕಿರಲಿ, ಬೇಡದಿರಲಿ ಕೆಲ ತಪಾಸಣೆಗಳನ್ನು ನಡೆಸುತ್ತಾರೆ. ಪ್ರತೀ ವೈದ್ಯರು ಆಸ್ಪತ್ರೆಗೆ ತಿಂಗಳೊಂದಕ್ಕೆ ಇಂತಿಷ್ಟು ವ್ಯವಹಾರ ನೀಡಬೇಕು ಎಂದು ರಹಸ್ಯ ಒಪ್ಪಂದವು ಕೆಲ ಆಸ್ಪತ್ರೆಗಳಲ್ಲಿ ಇವೆ. ಈ ಹಿನ್ನೆಲೆಯಲ್ಲಿ ಬಡ ರೋಗಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತೀ ರಾಜ್ಯದಲ್ಲೂ ಕೆಲ ಕಾನೂನುಗಳನ್ನು ರಚಿಸಲಾಗಿದೆ. ಅದೇ ರೀತಿ ಕೇಂದ್ರ ಸರಕಾರವೂ ಕೆಲ ಕಟ್ಟುಪಾಡುಗಳನ್ನು ವಿಧಿಸಿದೆ. ಆದರೆ, ಇಷ್ಟೆಲ್ಲ ಇದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಶೋಷಣೆ ನಿಂತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಶೋಷಣೆಯನ್ನು ತಡೆಯಬೇಕಿದ್ದರೆ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿರುವುದನ್ನು ತಪ್ಪಿಸಬೇಕು. ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವಂತಹ ಉತ್ತಮ ಗುಣಮಟ್ಟದ ಚಿಕಿತ್ಸೆ ಸರಕಾರಿ ಆಸ್ಪತ್ರೆಗಳಲ್ಲಿ ಸಿಕ್ಕರೆ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದು ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕಾಗಿದೆ.

ರೋಗಿಗಳ ಹಿತರಕ್ಷಣೆಗಾಗಿ ಕೇಂದ್ರ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಔಷಧಿ ಕ್ಷೇತ್ರದಲ್ಲಿನ ಅನೈತಿಕತೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರೋಗಿಗಳನ್ನು ಸುಲಿಗೆ ಮಾಡುವ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಯಂತ್ರಣಕ್ಕೆ ಒಳಪಡದ ಔಷಧಿ ಮತ್ತು ವೈದ್ಯಕೀಯ ವಸ್ತುಗಳ ಬೆಲೆಯ ಮೇಲೆ ಹತೋಟಿ ಸಾಧಿಸಬೇಕು. ಆಸ್ಪತ್ರೆಗಳ ಬಿಲ್‌ಗಳ ಬಗ್ಗೆ ಅನುಮಾನ ಉಂಟಾದಾಗ ಅದನ್ನು ಪ್ರಶ್ನಿಸುವ ಮತ್ತು ವಿಮರ್ಶಿಸುವ ದಿಟ್ಟತನವನ್ನು ಸಾರ್ವಜನಿಕರು ಕೂಡಾ ತೋರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News