ಕ್ರಿಕೆಟ್ ಜಾತಿ ರಾಜಕಾರಣ

Update: 2018-03-23 04:27 GMT

ಕ್ರಿಕೆಟ್ ತಾರೆ ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ ಎನ್ನಲಾಗಿರುವ ‘ಟ್ವೀಟ್’ ಕ್ರಿಕೆಟ್‌ನೊಳಗಿನ ‘ಬ್ರಾಹ್ಮಣ್ಯ ರಾಜಕೀಯ’ವನ್ನು ಮತ್ತೆ ಚರ್ಚೆಗೆಳೆದಿದೆ. ‘ಈ ಅಂಬೇಡ್ಕರ್ ಎಂದರೆ ಯಾರು? ಆತನೊಬ್ಬ ಮೀಸಲಾತಿ ಎಂಬ ವೈರಸ್‌ನ್ನು ದೇಶಾದ್ಯಂತ ಹರಡಿದವನು’ ಎಂಬ ಅರ್ಥದ ಟ್ವೀಟ್ ಒಂದು ಹಾರ್ದಿಕ್ ಪಾಂಡ್ಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಇದಕ್ಕೆ ಸಂಬಂಧಿಸಿ ದಲಿತರ ನಾಯಕನೊಬ್ಬ ಪಾಂಡ್ಯ ವಿರುದ್ಧ ದೂರನ್ನೂ ದಾಖಲಿಸಿದ್ದಾರೆ. ಆದರೆ ಇದೀಗ ಹಾರ್ದಿಕ್ ಆ ಸ್ಟೇಟಸ್‌ನ್ನು ನಿರಾಕರಿಸಿದ್ದಾರೆ. ‘‘ನನ್ನ ನಕಲಿ ಖಾತೆ ಸೃಷ್ಟಿಸಿ ಈ ಹೇಳಿಕೆಯನ್ನು ನೀಡಲಾಗಿದೆ. ಅದು ನನ್ನ ಅಧಿಕೃತ ಖಾತೆ ಅಲ್ಲ’’ ಎಂದಿದ್ದಾರೆ. ಹಾರ್ದಿಕ್ ಬ್ರಾಹ್ಮಣ ಸಮುದಾಯದಿಂದ ಬಂದಿರುವ ಆಟಗಾರರಾಗಿರುವುದರಿಂದ ಮತ್ತು ಈಗಾಗಲೇ ಕ್ರಿಕೆಟ್‌ನಲ್ಲಿ ಬ್ರಾಹ್ಮಣ್ಯದ ಪಾರಮ್ಯ ಟೀಕೆಗೊಳಗಾಗಿರುವುದರಿಂದ, ಹಾರ್ದಿಕ್ ಹೇಳಿಕೆ ಬೆಂಕಿಯಂತೆ ಹರಡುವುದಕ್ಕೆ ಮುಖ್ಯ ಕಾರಣ. ಅದರ ಪೂರ್ವಾಪರಗಳನ್ನು ತಿಳಿದುಕೊಳ್ಳದೆ ಮಾಧ್ಯಮಗಳೂ ಸುದ್ದಿ ಮಾಡಿರುವುದರಿಂದ ಬಹುಶಃ ಹಾರ್ದಿಕ್ ವಿವಾದಕ್ಕೊಳಗಾದರು. ಆದರೆ ಒಂದಂತೂ ಸತ್ಯ. ಈ ಟ್ವೀಟ್ ಹೊರಬಿದ್ದ ತಕ್ಷಣವೇ ಪಾಂಡ್ಯ ಹೇಳಿಕೆ ನೀಡಿದ್ದಿದ್ದರೆ ವಿವಾದ ಇಷ್ಟರಮಟ್ಟಿಗೆ ಬೆಳೆಯುತ್ತಿರಲಿಲ್ಲವೇನೋ? ಅವರ ಮೇಲೆ ಮೊಕದ್ದಮೆ ದಾಖಲಿಸಿದ ಬಳಿಕ, ಆ ಟ್ವೀಟ್‌ನ್ನು ಅವರು ನಿರಾಕರಿಸಿದರು ಮತ್ತು ಅದು ತನ್ನ ಅಧಿಕೃತ ಖಾತೆ ಅಲ್ಲ ಎಂದು ಹೇಳಿಕೆ ನೀಡಿದರು.

   ಕ್ರಿಕೆಟ್ ತಾರೆಯ ರಾಜಕೀಯ ಹೇಳಿಕೆ ಇದೇ ಮೊದಲಲ್ಲ. ಹಾರ್ದಿಕ್ ಪಾಂಡ್ಯ ಅವರು ಹೇಳಿಕೆ ನೀಡುವ ಮೊದಲು ಹಲವರು ಕ್ರಿಕೆಟ್ ತಾರೆಯರು ವಿವಾದಾತ್ಮಕ ರಾಜಕೀಯ ಹೇಳಿಕೆಗಳನ್ನು ನೀಡಿದ್ದಾರೆ ಎನ್ನುವುದನ್ನು ಗಮನಿಸಬೇಕು. ಗೌತಮ್ ಗಂಭೀರ್ ಮತ್ತು ಸೆಹ್ವಾಗ್ ತಮ್ಮ ವ್ಯಾಪ್ತಿಗೆ ಒಳಪಡದ ರಾಜಕೀಯ ಸಂಗತಿಗಳ ಕುರಿತಂತೆ ಪದೇ ಪದೇ ಹೇಳಿಕೆ ನೀಡುತ್ತಾ ‘ಕ್ರಿಕೆಟ್‌ಗೂ ರಾಜಕೀಯ’ಕ್ಕೂ ಒಂದು ಅಘೋಷಿತ ಸಂಬಂಧವನ್ನು ಕಲ್ಪಿಸಿದರು. ಸೆಹ್ವಾಗ್ ಅವರಂತೂ ಬಹಿರಂಗವಾಗಿಯೇ ಬಿಜೆಪಿಯ ಜೊತೆಗೆ ನಿಂತರು. ಗೌತಮ್ ಗಂಭೀರ್ ಸೈನಿಕರಿಗೆ ಸಂಬಂಧಪಟ್ಟ ಭಾವನಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸಿದರು. ಹುತಾತ್ಮ ಸೈನಿಕರ ಕುರಿತಂತೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದರು. ಪದೇ ಪದೇ ಇಂತಹ ರಾಜಕೀಯ ಹೇಳಿಕೆಗಳು ಕ್ರಿಕೆಟ್ ತಾರೆಯರಿಂದ ಯಾಕೆ ಹೊರ ಹೊಮ್ಮುತ್ತವೆೆ? ಅಧಿಕೃತವಾಗಿ ಒಂದು ಪಕ್ಷಕ್ಕೆ ಸೇರಿ ಹೇಳಿಕೆ ನೀಡುವುದು ಸರಿ. ಆದರೆ ಇವರು ಕ್ರಿಕೆಟ್ ತಾರೆಯರಾಗಿದ್ದುಕೊಂಡೇ ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತಕ್ಕೆ ನೆರವು ನೀಡುತ್ತಿದ್ದಾರೆ. ಅದೂ, ಬಲಪಂಥೀಯ ಸಿದ್ಧಾಂತಕ್ಕೆ. ಗಂಭೀರ್, ಸೆಹ್ವಾಗ್‌ರ ಹೇಳಿಕೆಯ ಮುಂದುವರಿದ ಭಾಗದಂತೆ ಹಾರ್ದಿಕ್ ಪಾಂಡ್ಯ ಅವರ ಹೇಳಿಕೆ ಭಾಸವಾದರೆ ಅದಕ್ಕೆ ಈ ಹಿರಿಯ ಕ್ರಿಕೆಟ್ ತಾರೆಯರೇ ಕಾರಣ. ಕ್ರಿಕೆಟ್ ತಾರೆಯರು ಅನಧಿಕೃತವಾಗಿ ರಾಜಕೀಯ ನಾಯಕರ ವಕ್ತಾರರಾಗುವುದು ಕ್ರೀಡೆಗೆ ಮಾಡುವ ಅವಮಾನ ಮತ್ತು ಕ್ರೀಡಾಭಿಮಾನಿಗಳಿಗೆ ಮಾಡುವ ಮೋಸ. ಪಾಂಡ್ಯ ಹೆಸರಿನಲ್ಲಿ ಟ್ವೀಟ್ ಬಿದ್ದಾಕ್ಷಣ ಜನರು ಆಕ್ರೋಶಗೊಳ್ಳಲು ಇದೇ ಕಾರಣವಾಗಿರಬಹುದು. ಕ್ರಿಕೆಟ್‌ನ್ನು ಉದ್ಯಮವಲಯ ಸುತ್ತಿಕೊಂಡಿದೆ ನಿಜ. ಅದರ ಜೊತೆ ಜೊತೆಗೆ ರಾಜಕೀಯ ಅದರಲ್ಲೂ ಬ್ರಾಹ್ಮಣ್ಯ ರಾಜಕಾರಣ ಸುತ್ತಿಕೊಳ್ಳುತ್ತಿರುವುದು ನೋಡಿಯೂ ಜನರು ಸಹಿಸುವುದು ಕಷ್ಟ.

ಕ್ರಿಕೆಟ್ ಎನ್ನುವುದು ಸೋಮಾರಿಗಳ ಆಟ ಎನ್ನುವ ಹೇಳಿಕೆಯಿದೆ. ‘‘11 ಮಂದಿ ಮೂರ್ಖ ಆಟಗಾರರು ಆಡುವ ಆಟವನ್ನು ಹನ್ನೊಂದು ಕೋಟಿ ಮೂರ್ಖ ಪ್ರೇಕ್ಷಕರು ನೋಡುವುದೇ ಕ್ರಿಕೆಟ್’’ ಎಂದು ಬರ್ನಾಡ್ ಶಾ ಹೇಳಿದ್ದರು. ಅದೇ ಹೇಳಿಕೆಯನ್ನು ಭಾರತೀಯ ಚಿಂತಕರೊಬ್ಬರು ‘‘ಹನ್ನೊಂದು ಮಂದಿ ಬುದ್ಧಿವಂತ ಬ್ರಾಹ್ಮಣರು ಆಡುವ ಆಟವನ್ನು ಹನ್ನೊಂದು ಕೋಟಿ ಮೂರ್ಖ ಭಾರತೀಯರು ನೋಡುವುದೇ ಕ್ರಿಕೆಟ್’’ ಎಂದಿದ್ದರು. ಈ ದೇಶದ ನಿಜವಾದ ಕ್ರೀಡೆಯನ್ನು ಕ್ರಿಕೆಟ್ ಎನ್ನುವ ಕಾರ್ಪೊರೇಟ್ ಪ್ರಾಯೋಜಿತ ಆಟ ನುಂಗಿದೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಕ್ರಿಕೆಟ್‌ಗೆ ವ್ಯಯಿಸುವ ಹಣ, ಸಮಯದಲ್ಲಿ ಅರ್ಧಪಾಲನ್ನು ಇತರ ಆಟಗಳಿಗೆ ವ್ಯಯಿಸಿದ್ದೇ ಆದರೆ, ಭಾರತ ಒಲಿಂಪಿಕ್ಸ್‌ನಲ್ಲಿ ಅಗ್ರಸ್ಥಾನದಲ್ಲಿರುತ್ತಿತ್ತು. ಕ್ರಿಕೆಟ್ ಆಟ ಇಂದು ಎಲ್ಲ ಬ್ರಾಹ್ಮಣ್ಯ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡು ಈ ದೇಶದ ತಳಸ್ತರದ ನಿಜವಾದ ಆಟಗಳನ್ನು, ಆಟಗಾರರನ್ನು ಕೆಳಕ್ಕೆ ತಳ್ಳಿದೆ. ದೈಹಿಕ ದೃಢತೆ, ಸಾಮರ್ಥ್ಯಗಳು ಬದಿಗೆ ತಳ್ಳಲ್ಪಟ್ಟಿವೆ. ಆ ಸ್ಥಾನದಲ್ಲಿ ಬ್ರಾಹ್ಮಣ್ಯದ ಮೆದುಳು ಕ್ರೀಡೆಯನ್ನು ನಿಯಂತ್ರಿಸುತ್ತಿದೆ. ಪರಿಣಾಮವಾಗಿಯೇ ಇಂದು ಕ್ರಿಕೆಟ್‌ನಲ್ಲಿ ಅತ್ಯಧಿಕ ಆಟಗಾರರು ಮೇಲ್ವರ್ಗದಿಂದ ಬಂದವರಾಗಿದ್ದಾರೆ. ಹಿಂದುಳಿದವರ್ಗ ಅಥವಾ ದಲಿತ ಸಮುದಾಯದ ಆಟಗಾರರ ಪಾಲುಗಾರಿಕೆ ತೀರಾ ಅಲ್ಪ ಮತ್ತು ಈ ಕ್ರಿಕೆಟ್ ಆಟವೇ ಭಾರತದ ಶಕ್ತಿಯೆಂಬಂತೆಯೂ ಮಾಧ್ಯಮಗಳು ಬಿಂಬಿಸುತ್ತಿವೆ. ದಲಿತ ಕ್ರಿಕೆಟ್ ಆಟಗಾರರು ಹಲವರು ಬಂದಿದ್ದಾರಾದರೂ, ಅವರನ್ನು ಅಷ್ಟೇ ತೀವ್ರವಾಗಿ ಬದಿಗೆ ತಳ್ಳಲಾಗಿದೆ. ಇರುವ ಒಂದೆರಡು ಹೆಸರುಗಳು ಮುನ್ನೆಲೆಗೆ ಬರದಂತೆಯೂ ನೋಡಿಕೊಳ್ಳಲಾಗಿದೆ. ಈ ಕಾರಣದಿಂದಲೇ, ದಲಿತ ನಾಯಕರೂ ಆಗಿರುವ ಕೇಂದ್ರ ಸಚಿವ ಅಠವಳೆ ‘‘ಕ್ರಿಕೆಟ್‌ನಲ್ಲಿ ದಲಿತರಿಗೆ ಮೀಸಲಾತಿಯನ್ನು ನೀಡಬೇಕು’’ ಎಂದು ಹೇಳಿದ್ದರು. ಪ್ರತಿಭಾವಂತ ದಲಿತ ಆಟಗಾರರಿದ್ದರೂ ಅವರನ್ನು ಬೆಳೆಸುವ, ರಾಷ್ಟ್ರಮಟ್ಟದಲ್ಲಿ ರೂಪಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. ಮೇಲ್ವರ್ಗದ ಜನರ ಕೈಯಲ್ಲಿ ಕ್ರಿಕೆಟ್‌ನ ಚುಕ್ಕಾಣಿ ಇರುವುದರಿಂದಲೇ ದಲಿತರಿಗೆ ಕ್ರಿಕೆಟ್‌ನೊಳಗೆ ಪ್ರವೇಶ ಸಿಗುತ್ತಿಲ್ಲ ಎನ್ನುವುದು ಅವರ ಆರೋಪವಾಗಿದೆ.

ಕ್ರಿಕೆಟ್ ಮತ್ತು ಕ್ರಿಕೆಟ್ ಆಟಗಾರರ ಬಗ್ಗೆ ಇಂತಹದೊಂದು ಅಭಿಪ್ರಾಯ ಜನಸಮೂಹದ ನಡುವೆ ಇರುವಾಗ, ಪಾಂಡ್ಯ ಹೆಸರಿನಲ್ಲಿ ‘ಅಂಬೇಡ್ಕರ್ ವಿರೋಧಿ’ ಹೇಳಿಕೆ ಹೊರಬಂದರೆ ಜನರು ಆಕ್ರೋಶ ವ್ಯಕ್ತಪಡಿಸುವುದು ಸಹಜವೇ ಆಗಿದೆ. ಈಗಾಗಲೇ ಮೀಸಲಾತಿಯನ್ನು ವ್ಯಂಗ್ಯ ಮಾಡುವುದಕ್ಕಾಗಿ ‘‘ಕ್ರಿಕೆಟ್ ಆಟದಲ್ಲೂ ಮೀಸಲಾತಿ ಇರಲಿ’’ ಎಂದು ಹೇಳಿಕೆ ನೀಡಿದವರಿದ್ದಾರೆ. ಇವರಿಗೆ ಮೀಸಲಾತಿಯ ಬಗ್ಗೆ ಅಸಹನೆ ಯಾಕಿದೆ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಇದೇ ಸಂದರ್ಭದಲ್ಲಿ ಇವರು ಆರೆಸ್ಸೆಸ್ ಪರವಾಗಿ ಹೇಳಿಕೆಗಳನ್ನು ನೀಡುವುದು, ಮೋದಿಯ ವಕ್ತಾರರ ಹಾಗೆ ಮಾತನಾಡುವುದು ಇವೆಲ್ಲವು ನಡೆಯುವಾಗ ಇಡೀ ಕ್ರಿಕೆಟ್ ಮಾಫಿಯಾದ ಬಗ್ಗೆಯೇ ಜನ ಅನುಮಾನ ಪಡುವುದು ಸಹಜವಾಗಿದೆ. ಈ ಹಿನ್ನೆಲೆಯಲ್ಲಿ ಪಾಂಡ್ಯ ಅವರ ಖಾತೆಯ ಹೇಳಿಕೆಯನ್ನು ಗಂಭೀರ ತನಿಖೆಗೆ ಒಳಪಡಿಸಬೇಕು. ನಿಜಕ್ಕೂ ಅದು ಪಾಂಡ್ಯ ಅವರ ಖಾತೆಯಾಗಿದ್ದರೆ ಅವರ ಮೇಲೆ ಭಾರೀ ಕ್ರಮ ಕೈಗೊಳ್ಳಬೇಕಾಗಿದೆ. ಯಾಕೆಂದರೆ ಅವರು ಈ ದೇಶದ ಪ್ರಜಾಸತ್ತೆಯ ಅಡಿಗಲ್ಲಾಗಿರುವ ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. ಅಂಬೇಡ್ಕರ್ ಕುರಿತಂತೆ ತುಚ್ಛ ಹೇಳಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಅದು ನಕಲಿ ಖಾತೆಯೇ ಆಗಿದ್ದರೆ, ಆ ಖಾತೆಯ ಹಿಂದಿರುವ ದುಷ್ಕರ್ಮಿಗಳನ್ನು ಬಂಧಿಸುವ ಕೆಲಸ ನಡೆಯಬೇಕು. ಹಾಗೆಯೇ ಕ್ರಿಕೆಟ್ ತಾರೆಯರು ಮೇಲ್ವರ್ಣೀಯ ರಾಜಕೀಯದಿಂದ ದೂರವಿದ್ದು ಕ್ರಿಕೆಟ್‌ನ ಕುರಿತಷ್ಟೇ ಮಾತನಾಡುವುದನ್ನು ಕಲಿಯಬೇಕಾಗಿದೆ. ಯಾಕೆಂದರೆ ಕ್ರಿಕೆಟ್ ಎಂದರೆ ಎಲ್ಲ ಜಾತಿ, ಧರ್ಮ, ಸಮುದಾಯವನ್ನು ಬೆಸೆಯುವ ಕೆಲಸವನ್ನು ಮಾಡುತ್ತಾ ಬಂದಿದೆ. ತಮ್ಮ ರಾಜಕೀಯ ಹೇಳಿಕೆಯ ಮೂಲಕ ಆ ಬೆಸುಗೆಯನ್ನು ಬೇರ್ಪಡಿಸಿದರೆ ಅದರಿಂದ ನಷ್ಟ ಕ್ರಿಕೆಟ್‌ಗೆ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News