ರಾಜ್ಯಸಭಾ ಚುನಾವಣೆ: ಬಿಜೆಪಿಗೆ ಮತ ಹಾಕಿದ ಶಾಸಕನನ್ನು ಉಚ್ಛಾಟಿಸಿದ ಬಿಎಸ್ಪಿ

Update: 2018-03-24 14:45 GMT

ಹೊಸದಿಲ್ಲಿ, ಮಾ.24: ಶುಕ್ರವಾರ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ತನ್ನ ಪಕ್ಷದ ಶಾಸಕ ಅನಿಲ್ ಸಿಂಗ್‌ರನ್ನು ಪಕ್ಷದಿಂದ ಉಚ್ಛಾಟಿಸಿರುವುದಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಶನಿವಾರ ತಿಳಿಸಿದ್ದಾರೆ.

ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷದ ಮಧ್ಯೆ ಹೊಸದಾಗಿ ರಚನೆಯಾಗಿರುವ ಮೈತ್ರಿಯನ್ನು ಮುರಿಯಲು ಬಿಜೆಪಿ ರಾಜ್ಯಸಭಾ ಚುನಾವಣೆಯನ್ನು ಸಾಧನವನ್ನಾಗಿ ಬಳಸಲು ಪ್ರಯತ್ನಿಸಿತ್ತು ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಮಾಯಾವತಿ ಆರೋಪಿಸಿದ್ದಾರೆ. ಆದರೆ ಶುಕ್ರವಾರದ ಫಲಿತಾಂಶವು ಎಸ್ಪಿ ಮತ್ತು ಬಿಎಸ್ಪಿಯ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಭಯದ ವಾತಾವರಣವನ್ನು ಸೃಷ್ಟಿಸಿದ ಪರಿಣಾಮ ಅಡ್ಡ ಮತದಾನ ನಡೆದಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಆರೋಪಿಸಿದ್ದಾರೆ.

ಈ ಅನೈತಿಕ ಗೆಲುವು, ಬಿಜೆಪಿ ಗೋರಖ್‌ಪುರ ಮತ್ತು ಫೂಲ್ಪುರ್ ಉಪಚುನಾವಣೆಯಲ್ಲಿ ಅನುಭವಿಸಿದ ಸೋಲಿಗೆ ಪರ್ಯಾಯವಾಗಲು ಸಾಧ್ಯವಿಲ್ಲ. ಈ ವಿಷಯ ಬಿಜೆಪಿಗೂ ತಿಳಿದಿದೆ ಎಂದು ಇದೇ ವೇಳೆ ಮಾಯಾವತಿ ಕುಟುಕಿದ್ದಾರೆ. ಬಿಎಸ್ಪಿ ಮುಖ್ಯಸ್ಥೆಯ ಆರೋಪವನ್ನು ತಳ್ಳಿ ಹಾಕಿರುವ ಬಿಜೆಪಿ, ಈ ಆರೋಪವು ಆಧಾರರಹಿತವಾಗಿದೆ ಎಂದು ತಿಳಿಸಿದೆ. ಚುನಾವಣೆಯಲ್ಲ ಸೋತ ಕ್ಷಣದಿಂದಲೇ ಬಿಎಸ್ಪಿ ನಾನಾ ಸಬೂಬುಗಳನ್ನು ನೀಡಲು ಆರಂಭಿಸಿದೆ. ಅವರ ಬಳಿ ಸಾಕಷ್ಟು ಮತಗಳು ಕೂಡಾ ಇರಲಿಲ್ಲ. ಹಾಗಾಗಿ ಅವರು ಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಗೆಲ್ಲಲು ಪ್ರಯತ್ನಿಸಿದರು. ಆದರೆ ಅದರಲ್ಲೂ ವಿಫಲವಾದರು. ಕುದುರೆ ವ್ಯಾಪಾರ ನಡೆದಿದೆ ಎಂಬ ಬಿಎಸ್ಪಿ ನಾಯಕಿಯ ಆರೋಪವು ಆಧಾರರಹಿತವಾಗಿದೆ ಎಂದು ಬಿಜೆಪಿಯ ಜಿವಿಎಲ್ ನರಸಿಂಹ ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News