ಪಿಎನ್‌ಬಿ ವಂಚನೆ ಪ್ರಕರಣ: ಇಡಿಯಿಂದ 120 ನಕಲಿ ಕಂಪೆನಿಗಳ ಪರಿಶೀಲನೆ; ಕೇಂದ್ರ

Update: 2018-03-24 15:46 GMT

ಹೊಸದಿಲ್ಲಿ, ಮಾ.24: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಮಾಡಿರುವ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು 120 ನಕಲಿ ಕಂಪೆನಿಗಳನ್ನು ಪರಿಶೀಲಿಸುತ್ತಿದೆ ಎಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ.

ನೀರವ್ ಮೋದಿ ಮತ್ತಾತನ ಸಹಚರರು ಸೇರಿ ನಕಲಿ ಒಪ್ಪಂದ ಪತ್ರಗಳನ್ನು ಬಳಸಿ (ಎಲ್‌ಒಯು) ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 12,000 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಶನಿವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿತ್ತ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ, ಜಾರಿ ನಿರ್ದೇಶನಾಲಯದಿಂದ ಪಡೆದಿರುವ ಮಾಹಿತಿಯ ಪ್ರಕಾರ, ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯು 120 ನಕಲಿ ಕಂಪೆನಿಗಳ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

 ಈ ಪ್ರಕರಣವು ಸದ್ಯ ತನಿಖೆಯ ಹಂತದಲ್ಲಿದೆ. ಹಾಗಾಗಿ ಹೆಚ್ಚಿನ ಮಾಹಿತಿಯನ್ನು ಮತ್ತು ನಕಲಿ ಕಂಪೆನಿಗಳ ಹೆಸರನ್ನು ಬಹಿರಂಗಪಡಿಸುವುದರಿಂದ ತನಿಖೆಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಬ್ಯಾಂಕ್ ತಿಳಿಸಿರುವುದಾಗಿ ಶುಕ್ಲಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಯು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಹಣ ವಂಚನಾ ತಡೆ ಕಾಯ್ದೆಯಡಿ ಎರಡು ದೂರುಗಳನ್ನು ದಾಖಲಿಸಿದ್ದು ದೇಶದ 247 ಕಡೆಗಳಲ್ಲಿ ದಾಳಿಗಳನ್ನು ನಡೆಸಿದೆ ಎಂದು ಶುಕ್ಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News