ಜೆಡಿಎಸ್ ಎಂದರೆ ಜನತಾದಳ ಸಂಘಪರಿವಾರ: ರಾಹುಲ್ ಗಾಂಧಿ ಟೀಕೆ

Update: 2018-03-24 17:15 GMT

ಮಂಡ್ಯ, ಮಾ.24: ಜೆಡಿಎಸ್ ಎಂದರೆ ಜನತಾ ದಳ ಸಂಘಪರಿವಾರ ಎಂದು ಲೇವಡಿ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ಬಿಜೆಪಿಯ ಬಿ ಟೀಂ ಆಗಿದೆ ಎಂದು ಟೀಕಿಸಿದ್ದಾರೆ.

ಮಳವಳ್ಳಿ ಕನಕದಾಸ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಜನಾಶೀರ್ವಾದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಲು ಜೆಡಿಎಸ್ ಮುಂದಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಜತೆ ಬಿ ಟೀಂ,ಸಿ ಟೀಂ, ಯಾವುದೇ ಟೀಂ ಬಂದರೂ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಎಲ್ಲೇ ಹೋದರೂ ಸುಳ್ಳು ಹೇಳುತ್ತಾರೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುತ್ತಾರೆಂದು ಹೇಳಿ 15 ರೂ. ಕೂಡಾ ಹಾಕಲಿಲ್ಲ. ಉದ್ಯೋಗವನ್ನೂ ಸೃಷ್ಠಿಸಲಿಲ್ಲ. ನರೇಂದ್ರ ಮೋದಿಯವರೇ ನಾನು ದೇಶದ ಕಾವಲುಗಾರ ಎನ್ನುತ್ತೀರಿ, ಆದರೆ ನಿಮ್ಮ ಜೊತೆಗೇ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಹಾಗೂ ಮಂತ್ರಿಗಳಿದ್ದಾರೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

'ಬಸವಣ್ಣ ನುಡಿದಂತೆ ನಡೆದರು. ಹಾಗೆಯೇ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ನುಡಿದಂತೆ ನಡೆದಿದೆ. ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ' ಎಂದು ಅವರು ಶ್ಲಾಘಿಸಿದರು. 'ಬಂಡವಾಳಶಾಹಿಗಳ ಸಾಲಮನ್ನಾ ಮಾಡಿದ್ದೀರಿ, ರೈತರ ಸಾಲಮನ್ನಾ ಮಾಡಲಿಲ್ಲವೇಕೆ ಎಂದು ಒಮ್ಮೆ ಮೋದಿ ಅವರನ್ನು ಕೇಳಿದೆ. ಆದರೆ, ಮೋದಿಯವರಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದು ಹೇಳಿದರು.

ರಾಜ್ಯ ಸರಕಾರ ರೈತ, ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಸಾಲಮನ್ನಾ ಮಾಡಿದೆ. ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿದೆ. ನೀರಾವರಿ ಸೇರಿದಂತೆ ಹತ್ತು ಹಲವು ರೀತಿಯ ಅಭಿವೃದ್ಧಿ ಮಾಡಿದೆ. ಅದಕ್ಕಾಗಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಅವರು ಮನವಿ ಮಾಡಿದರು.

ತಿಪ್ಪರಲಾಗ ಹಾಕಿದರೂ ಗೆಲ್ಲುವುದಿಲ್ಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್‍ನವರು ಅವಕಾಶವಾದಿಗಳು. ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಈಗ ಗೆಲ್ಲುತ್ತೇವೆಂದು ಹೇಳುತ್ತಾರೆ. ತಿಪ್ಪರಲಾಗ ಹಾಕಿದರೂ ಗೆಲ್ಲುವುದಿಲ್ಲ ಎಂದು ಸವಾಲು ಹಾಕಿದರು.

ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರೆಹಮಾನ್ ಖಾನ್, ರಾಜ್ಯ ವಿಷ್ಣುನಾಥನ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ಡಿ.ಕೆ.ಶಿವಕುಮಾರ್, ಸತೀಶ್‍ಜಾರಕಿ ಹೊಳಿ, ಸ್ಥಳೀಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News