ತುಮಕೂರು: ಕೆಪಿಸಿಸಿ ಅಧ್ಯಕ್ಷರು ಮತ್ತು ಸಂಸದರ ಮೇಲಿನ ಆರೋಪಕ್ಕೆ ಕಾಂಗ್ರೆಸ್ ಖಂಡನೆ

Update: 2018-03-24 17:52 GMT

ತುಮಕೂರು,ಮಾ.24: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ ಅವರು ಕೆಪಿಸಿಸಿ ಅಧ್ಯಕ್ಷರು ಮತ್ತು ಸಂಸದರ ಮೇಲೆ ಮಾಡಿರುವ 10 ಕೋಟಿ ಡಿಲೀಂಗ್ ಆರೋಪ ಸತ್ಯಕ್ಕೆ ದೂರವಾಗಿದ್ದು,130 ವರ್ಷಗಳ ಇತಿಹಾಸವಿರುವ ಪಕ್ಷಕ್ಕೆ ಇಲ್ಲಿಯವರೆಗೆ ಅಂತಹ ದುಸ್ಥಿತಿ ಬಂದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ ತಿಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಕಳೆದ ಐದು ವರ್ಷಗಳ ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದೆಯೇ ಹೊರತು, ಒಳಸಚಿಚಿನಿಂದ ಗೆಲ್ಲುವ ಯಾವ ಮಾರ್ಗಗಳನ್ನು ಹುಡುಕಿಕೊಂಡಿಲ್ಲ. ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ಕಾಂಗ್ರೆಸ್ ನಾಯಕರ ಬೆಂಬಲವೇ ಕಾರಣ ಎಂದು ಹೇಳಿದ್ದಸುರೇಶಗೌಡ, ಈಗ 10 ಕೋಟಿ ಡಿಲೀಂಗ್ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿದರೆ, ಅವರು ಸೋಲಿನ ಹತಾಶೆಯಲ್ಲಿ ಭ್ರಮನಿರಸನಗೊಂಡು, ಮತಿಭ್ರಮಣೆಯಿಂದ ಹೇಳಿಕೆ ನೀಡುತ್ತಿದ್ದಾರೆ ಎಂದೆನಿಸುತ್ತದೆ. ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಗೆಲ್ಲುವಂತಹ ದುಸ್ಥಿತಿ ಕಾಂಗ್ರೆಸ್‍ಗೆ ಬಂದಿಲ್ಲ ಎಂದರು.

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಪ್ರತಿ ಕ್ಷೇತ್ರದಲ್ಲಿಯೂ ಸರಾಸರಿ10 ಕ್ಕು ಹೆಚ್ಚು ಆಕಾಂಕ್ಷಿಗಳಿದ್ದಾರೆ. ಇಂತಹ ಸಂದರ್ಭದಲ್ಲಿ ಒಳ ಒಪ್ಪಂದ ಮಾಡಿಕೊಂಡು ಡಮ್ಮಿ ಅಭ್ಯರ್ಥಿ ಹಾಕುವ ಪ್ರಮಯವೇ ಇಲ್ಲ. ತುಮಕೂರು ಗ್ರಾಮಾಂತರದಲ್ಲಿ ಪಕ್ಷ ಸುರೇಶಗೌಡರ ವಿರುದ್ದ ಪ್ರಬಲವಾದ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುವ ಜೊತೆಗೆ ಗೆಲುವು ಸಾಧಿಸಲಿದ್ದೇವೆ ಎಂದ ಕೆಂಚಮಾರಯ್ಯ, ಬಿಜೆಪಿ ರೀತಿ ಕಣಕ್ಕೆ ಇಳಿಯಲು ಸ್ಪರ್ಧಿಗಳಿಲ್ಲದೆ ಪರದಾಡುವಂತಹ ಸ್ಥಿತಿ ಇಲ್ಲ ಎಂದು ವ್ಯಂಗ್ಯವಾಡಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿ ರಾಯಸಂದ್ರ ರವಿಕುಮಾರ್ ಮಾತನಾಡಿ, ನ್ಯಾಯಾಧೀಶರಾಗಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದಿರುವ ಸಂಸದ ಮುದ್ದಹನುಮೇಗೌಡ, ವಿದೇಶದಲ್ಲಿ ಓದಿ ಡಾಕ್ಟರೇಟ್ ಪಡೆದಿರುವ ಕೆಪಿಸಿಸಿ ಅದ್ಯಕ್ಷರ ವಿರುದ್ದ 10 ಕೋಟಿ ಡಿಲಿಂಗ್ ಆರೋಪ ಹೊರಿಸಿರುವ ಶಾಸಕ ಬಿ.ಸುರೇಶಗೌಡ ಕೂಡಲೇ ಕ್ಷಮೆಯಾಚಿಸದಿದ್ದಲ್ಲಿ, ಅವರು ಗ್ರಾಮಾಂತರದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರೂ ಅವರ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂದರು.

ಶಾಸಕ ಸುರೇಶಗೌಡರಿಗೆ ಡೀಲಿಂಗ್ ಎಂಬುದು ಏನು ಎಂದು ತಿಳಿದಿದೆ. ಅವರು ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾಗಿದ್ದಾಗ ಯಾವ ವಿಚಾರಗಳಿಗೆ ಡೀಲಿಂಗ್ ನಡೆಸಿದ್ದರು ಎಂಬುದನ್ನು ವಿವಿಯ ಪ್ರತಿಯೊಂದು ಗೋಡೆಯೂ ಹೇಳುತ್ತವೆ. ಅವರು ಎಂತಹ ರಾಜಕಾರಣಿ ಎಂಬುದನ್ನು ಗುತ್ತಿಗೆದಾರರನ್ನು ಕೇಳಿದರೆ ತಿಳಿಯುತ್ತದೆ. ಅಲ್ಲದೆ ಗುಬ್ಬಿ ಶಾಸಕರನ್ನು ಅಪರೇಷನ್ ಕಮಲ ಮಾಡಲು ಹೋಗಿ ಸಿಕ್ಕಿ ಬಿದ್ದು ಜನರ ಕೈಯಲ್ಲಿ ಉಗಿಸಿಕೊಂಡಿದ್ದನ್ನು ಇಂದಿಗೂ ಕ್ಷೇತ್ರದ ಜನತೆ ಮರೆತಿಲ್ಲ. ಅಮಲಿನಲ್ಲಿ ಬಿಜೆಪಿ, ಆರ್.ಎಸ್.ಎಸ್.ನಾಯಕರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ನಮ್ಮ ಬಳಿಯೇ ಇದೆ. ಶೀಘ್ರ ಕಾಂಗ್ರೆಸ್ ಮುಖಂಡರ ಕ್ಷಮೆ ಕೋರದಿದ್ದರೆ ಸಿಡಿ ಸಾರ್ವಜನಿಕ ದರ್ಶನಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ತುಮಕೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಸುಜಾತ, ಹೆಚ್.ಎಸ್.ಹೇಮಂತಕುಮಾರ್, ನ್ಯಾತೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News