ಹಣ- ಜಾತಿಯ ನಡುವೆ ಧರ್ಮ ನರಳುತ್ತಿದೆ: ಮಾದರ ಚೆನ್ನಯ್ಯ ಸ್ವಾಮೀಜಿ

Update: 2018-03-24 17:57 GMT

ಚಿಕ್ಕಮಗಳೂರು, ಮಾ.24: ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡು ಧಾರ್ಮಿಕ ಕ್ಷೇತ್ರದ ಏಳಿಗೆಗೆ, ಧರ್ಮ ಜಾಗೃತಿಗೆ, ಆಧ್ಯಾತ್ಮದ ಪ್ರಸರಣಕ್ಕೆ ಪ್ರಯತ್ನಿಸುವ ರಾಜಕಾರಣಿಗಳು ಪ್ರಸಕ್ತ ಸಮಾಜದಲ್ಲಿ ನಾಪತ್ತೆಯಾಗಿದ್ದಾರೆಂದು ಚಿತ್ರದುರ್ಗ ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಶಾಸಕ ಸಿ.ಟಿ.ರವಿಯವರ ನಿವಾಸದಲ್ಲಿ ಶನಿವಾರ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತಿ, ಹಣದ ನಡುವೆ ಸಿಲುಕಿ ಧರ್ಮಗಳು ನರಳುತ್ತಿವೆ. ಧರ್ಮದ ಹೆಸರಿನಲ್ಲಿ ರಾಜಕಾರಣ ವಿಜೃಂಭಿಸುತ್ತಿದೆ. ಮೌಲ್ಯಯುತ ರಾಜಕಾರಣ ಮರೆಯಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾಧವ್ಯಕ್ತಪಡಿಸಿದರು.

ರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಲಾಗುತ್ತಿದೆ. ಪ್ರಸ್ತುತ ದಿನಮಾನಕ್ಕೆ ಧರ್ಮ ಹಾಗೂ ಮೌಲ್ಯ ಎರಡನ್ನು ಜೊತೆಗೆ ಕೊಂಡೊಯ್ಯುವ ರಾಜಕಾರಣಿಗಳ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ಹೊಸದುರ್ಗದ ಉಪ್ಪಾರ ಮಠದ ಭಗೀರಥ ನಿರಂಜನಾ ಸ್ವಾಮೀಜಿ ಮಾತನಾಡಿ, ಈ ಭೂಮಿಯಲ್ಲಿ ಜನಿಸಿದ ನಾವು ದೇವರು, ತಂದೆ, ತಾಯಿ ಹಾಗೂ ಗುರುವಿನ ಋಣವನ್ನು ತೀರಿಸಬೇಕು. ಸನ್ಮಾಗದಲ್ಲಿ ನಡೆಯುವ ಮೂಲಕದ ದೇವರ ಋಣ ತೀರಿಸಬೇಕು ಹಾಗೂ ತಂದೆ-ತಾಯಿ ನಮಗೆ ಜನ್ಮ ನೀಡಿದ್ದಾರೆ. ಅವರನ್ನು ನೋಯಿಸದೆ, ಅವರನ್ನು ಚೆನ್ನಾಗಿ ನೋಡಿಕೊಳ್ಳವ ಮೂಲಕ ಅವರ ಋಣ ತೀರಿಸಬೇಕು ಎಂದು ಸಲಹೆ ನೀಡಿದರು.

ಗುರು-ಹಿರಿಯರು ನಮಗೆ ವಿದ್ಯೆಯನ್ನು ಹೇಳಿಕೊಡುತ್ತಾರೆ. ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡಿ ತಾವು ಹೆಸರು ಪಡೆಯುವುದಲ್ಲದೆ, ಗುರುಗಳಿಗೂ ಒಳ್ಳೆಯ ಹೆಸರು ಬರುವಂತೆ ಮಾಡುವ ಮೂಲಕ ಅವರ ಋಣವನ್ನು ತೀರಿಸಬೇಕು ಎಂದು ಹೇಳಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ನಾನೇ ಮಠಗಳಿಗೆ ಹೋಗಿ ಗುರುಗಳ ಆಶೀರ್ವಾದ ಪಡೆಯಬೇಕು ಎಂಬ ಬಯಕೆ ಇತ್ತು. ಗುರುಗಳೇ ತಮ್ಮ ಮನೆಗೆ ಬಂದು ಆಶೀರ್ವಾದ ನೀಡುವುದಾಗಿ ತಿಳಿಸಿದ್ದರಿಂದ ಇಂದು ಸ್ವಾಮೀಜಿಗಳ ಪಾದಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಇದು ನನ್ನ ಸೌಭಾಗ್ಯ ಎಂದು ಹೇಳಿದರು. 

ಸಮಾಜ ಹಾಗೂ ಕ್ಷೇತ್ರಕ್ಕೆ ಒಳ್ಳೆಯದು ಮಾಡಬೇಕೆಂಬ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ತಮ್ಮ ಧ್ಯೇಯೋದ್ದೇಶಗಳು ಬದಲಾಗಬಾರದು. ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಬುದ್ದಿ ಮುಂದುವರೆಯಲಿ ಎಂಬ ಆಶೀರ್ವಾದವನ್ನು ಸ್ವಾಮೀಜಿಗಳಲ್ಲಿ ಬೇಡಿಕೊಂಡಿದ್ದೇನೆ ಎಂದರು.

ಪಾದಪೂಜೆಗೂ ಮುನ್ನಾ ಶಾಸಕ ಸಿ.ಟಿ.ರವಿ ಅವರ ಮನೆಗೆ ಆಗಮಿಸಿದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಉಪ್ಪಾರ ಮಠದ ಭಗೀರಥ ನಿರಂಜನಾ ಸ್ವಾಮೀಜಿ, ಚಿತ್ರದುರ್ಗದ ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪ್ರಸನ್ನ ಸ್ವಾಮೀಜಿ, ಸೇವಾಲಾಲ್ ಮಠದ ಬಸವ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬ್ರಹ್ಮಶ್ರೀ ನಾರಾಯಣ ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಹಾಗೂ ಸವಿತಾ ಸಮಾಜದ ಸ್ವಾಮೀಜಿಗಳನ್ನು ಶಾಸಕ ಸಿ.ಟಿ.ರವಿ ಹಾಗೂ ಅವರ ಪತ್ನಿ ಪಲ್ಲವಿ ಸಿ.ಟಿ.ರವಿ ಸ್ವಾಗತಿಸಿ ಪಾದಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಹಲವು ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News