ದೇಶದ ಎಲ್ಲಾ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬ್ರಾಡ್‍ಬ್ಯಾಂಡ್ ಸೌಲಭ್ಯಕ್ಕೆ ಕ್ರಮ: ಮನೋಜ್ ಸಿನ್ಹ

Update: 2018-03-24 18:20 GMT

ಶಿವಮೊಗ್ಗ, ಮಾ. 24: ದೇಶದಲ್ಲಿ ಸುಮಾರು1.50ಲಕ್ಷ ಗ್ರಾಮ ಪಂಚಾಯತ್ ಗಳಿದ್ದು, ಅವುಗಳಲ್ಲಿ ಸುಮಾರು 1 ಲಕ್ಷ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್. ವತಿಯಿಂದ ಬ್ರಾಡ್‍ಬ್ಯಾಂಡ್ ಸೌಲಭ್ಯ ಒದಗಿಸಲಾಗಿದ್ದು, ಉಳಿದ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬ್ರಾಡ್‍ಬ್ಯಾಂಡ್ ಸೌಲಭ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರ್ಕಾರದ ಸಂವಹನ ಮತ್ತು ರೈಲ್ವೆ ಇಲಾಖೆ ರಾಜ್ಯ ಸಚಿವ ಮನೋಜ್ ಸಿನ್ಹ ಅವರು ಹೇಳಿದರು.

ಅವರು ಇಂದು ಭಾರತ ಸಂಚಾರ ನಿಗಮವು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ರಾಜ್ಯದ ಮೊದಲ 4ಜಿ ಮೊಬೈಲ್ ಟವರ್ ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಶೀಘ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಈ 4ಜಿ ಮೊಬೈಲ್ ಟವರ್ ಗಳನ್ನು ರಾಜ್ಯದ ಆಯ್ದ 540 ಸ್ಥಳಗಳಲ್ಲಿ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದವರು ನುಡಿದರು.

2014 ರಿಂದೀಚೆಗೆ ದೇಶದ ಪ್ರಗತಿಯ ಗತಿ ಬದಲಾಗಿದೆ. ಡಿಜಿಟಲ್ ಇಂಡಿಯಾದಂತಹ ಹೊಸ ಪರಿಕಲ್ಪನೆಯ ಕಾರ್ಯಕ್ರಮಗಳು ಜಾರಿಗೊಂಡು ಜನಪ್ರಿಯತೆ ಗಳಿಸಿವೆ. ಒಂದು ಹಂತದಲ್ಲಿ ವಿಶ್ವದಲ್ಲಿ ಮುಂದುವರೆದಿರುವ ಅಮೇರಿಕಾ, ಚೀನಾದಂತಹ ರಾಷ್ಟ್ರಗಳಲ್ಲಿ ಬಳಸಲಾಗುತ್ತಿರುವ ಮೊಬೈಲ್ ಸೇವೆಗಳನ್ನು ಭಾರತೀಯರು ಬಳಸಲು ಸಾಧ್ಯವಾಗಿದೆ. ಖಾಸಗಿ ಟೆಲಿಕಾಂ ಸಂಸ್ಥೆಗಳ ಭಾರೀ ಸ್ಪರ್ಧೆಗಳ ನಡುವೆಯೂ ಭಾರತ ಸಂಚಾರ ನಿಗಮವು ಉನ್ನತ ಸಾಧನೆ ಮಾಡಿದೆ. ಈ ಸಾಧನೆ ಇಲಾಖೆಯ ತಂತ್ರಜ್ಞರು, ಅಧಿಕಾರಿಗಳ ಶ್ರಮದಿಂದ ಸಾಧ್ಯವಾಗಿದೆ ಎಂದವರು ನುಡಿದರು.

ಬದಲಾಗುತ್ತಿರುವ ಕಾಲಮಾನಕ್ಕನುಗುಣವಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ಸೇವೆ ನೀಡುವಲ್ಲಿ ಭಾರತ ಸಂಚಾರ ನಿಗಮವು ಯತ್ನಿಸುತ್ತಿದೆ. ಹಾಗೆಯೇ ಅಂಚೆ ಇಲಾಖೆಯು ಕೂಡ ಆಧಾರ್, ಪಾಸ್‍ಪೋರ್ಟ್, ಬ್ಯಾಂಕಿಂಗ್ ಸೇವೆ ಮುಂತಾದವುಗಳನ್ನು ಅಳವಡಿಸಿಕೊಂಡು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಕಾರ್ಯಸೂಚಿಯನ್ನು ಬದಲಾಯಿಸಿಕೊಂಡು ಮುಂಚೂಣಿ ಸಂಸ್ಥೆ ಎನಿಸಿದೆ ಎಂದು ಹೇಳಿದರು.

ಕಳೆದ ಕೆಲವು ದಶಕಗಳನ್ನು ಗಮನಿಸಿದಾಗ ಪ್ರಸ್ತುತ ಸಂದರ್ಭದಲ್ಲಿ ಭಾರತೀಯ ರೈಲ್ವೇಯಲ್ಲಿ ಶೇ.22ರಷ್ಟು ರೈಲ್ವೇ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಹೆಚ್ಚಾಗುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ರೈಲ್ವೇ ಕ್ಷೇತ್ರದ ಪ್ರಗತಿ ಕಾರ್ಯಗಳಿಗೂ ಕೇಂದ್ರ ಸರ್ಕಾರದ ವತಿಯಿಂದ ಭಾರೀ ಪ್ರಮಾಣದ ಅನುದಾನ ವ್ಯಯ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರೈಲ್ವೇ ಯೋಜನೆಗಳಿಗೆ 1,48,000 ಕೋಟಿ ರೂ.ಗಳನ್ನು ಖಚು ಮಾಡಲಾಗುತ್ತಿದೆ ಎಂದ ಅವರು, ಜಿಲ್ಲೆಯ ಜನರ ನಿರೀಕ್ಷೆಯಂತೆ ಹೊಸ ರೈಲು ಮಾರ್ಗಗಳ ಆರಂಭ ಮತ್ತು ಡಬ್ಲಿಂಗ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಯೋಚಿಸಲಾಗಿದೆ. ರೈಲ್ವೆ ಕಾಮಗಾರಿಗಳಿಗೆ ಅಗತ್ಯ ಭೂಮಿ ಮಂಜೂರು ಮಾಡಿದಲ್ಲಿ ಕೇಂದ್ರದ ವತಿಯಿಂದ ಆಗಬೇಕಾದ ಕೆಲಸ ಕಾರ್ಯಗಳಿಗೆ ಸರ್ಕಾರ ಬದ್ದವಾಗಿದೆ ಎಂದವರು ನುಡಿದರು.

ಈ ಕಾರ್ಯಕ್ರಮದಲ್ಲಿ ನವದೆಹಲಿ ಮಾರುಕಟ್ಟೆ ವಿಭಾಗದ ನಿರ್ದೇಶಕ ಆರ್.ಕೆ.ಮಿತ್ತಲ್, ಪ್ರಧಾನ ವ್ಯವಸ್ಥಾಪಕ ಅನಿಲ್ ಜೈನ್, ರಾಜ್ಯವಲಯದ ಪ್ರಧಾನ ವ್ಯವಸ್ಥಾಪಕ ಆರ್.ಮಣಿ, ಚೀಫ್ ಜನರಲ್ ಪೋಸ್ಟ್ ಮಾಸ್ಟರ್ ಚಾರ್ಲ್ ಲೋಬೊ ಹಾಗೂ ಸೌತ್ ವೆಸ್ಟ್ರನ್ ರೈಲ್ವೇಯ ಜನರಲ್ ಮ್ಯಾನೇಜರ್ ಎ.ಕೆ.ಗುಪ್ತಾ ಸೇರಿದಂತೆ ಭಾರತ ಸಂಚಾರ ನಿಗಮದ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News