ಸಿದ್ದರಾಮಯ್ಯರಿಗೆ ದಲಿತರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ: ಎಚ್.ಡಿ.ಕುಮಾರಸ್ವಾಮಿ
ಮೈಸೂರು,ಮಾ.27: ದಲಿತರ ಬಗ್ಗೆ ಮಾತನಾಡುವ ಯೋಗ್ಯತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.
ನಂಜನಗೂಡಿನ ವಿಧ್ಯಾವರ್ಧಕ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ನಂಜನಗೂಡು ವಿಧಾನಸಭಾ ಕ್ಷೇತ್ರದ ಕುಮಾರ ಪರ್ವ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜೆಡಿಎಸ್ ನವರಿಗೆ ತಾಕತ್ತಿದ್ದರೆ ದಲಿತರು ಅಥವಾ ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಹೇಳುತ್ತಾರೆ. ಮೊದಲು ಇವರಿಗೆ ದಲಿತರ ಬಗ್ಗೆ ಕಾಳಜಿ ಇದೆಯೇ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಲಿ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶ್ರಮವನ್ನು ಇವರು ಬಳಸಿಕೊಂಡು ಮುಖ್ಯಮಂತ್ರಿಯಾದರು. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತನಗೆ ಪ್ರತಿಸ್ಪರ್ಧಿಯಾಗುತ್ತಾರೆ ಎಂದು ಅವರನ್ನು ಕೇಂದ್ರಕ್ಕೆ ಕಳುಹಿಸಿದರು. ಇನ್ನು ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು. ಸಚಿವರಾಗಿದ್ದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದರು. ಇಂತವರು ನಮಗೆ ಬುದ್ಧಿ ಹೇಳುತ್ತಾರೆ. ಇವರಿಂದ ನಾವು ಪಾಠ ಕಲಿಯಬೇಕಿಲ್ಲ. ಇವರಿಗೆ ದಲಿತರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ, ಇವರಿಗೆ ತಾಕತ್ತಿದ್ದರೆ ಈ ಚುನಾವಣೆಯಲ್ಲಿ ದಲಿರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.
ಇವರ ದರ್ಪ, ದೌಲತ್ತು ಹೆಚ್ಚಿಗೆ ದಿನ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷದ ಸಾಧನೆ ಶೂನ್ಯ, ರೈತರ ಬಗ್ಗೆ ಕಾಳಜಿ ಇವರಿಗಿಲ್ಲ. ರಾಜ್ಯದಲ್ಲಿ 4 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹಕಾರ ಬ್ಯಾಂಕಿನ 50 ಸಾವಿರ ವರೆಗಿನ ಸಾಲ ಮನ್ನಾ ಮಾಡುವುದಾಗಿ ಸಿಎಂ ಹೇಳಿದ್ದರು. ಆದರೆ ಕಳೆದ ಜೂನ್ ನಲ್ಲಿ 1.5 ಸಾವಿರ ಕೋಟಿ ಮಾತ್ರ ಬಿಡುಗಡೆ ಮಾಡಿದ್ದು, ಇನ್ನು ಉಳಿದ 6.5 ಸಾವಿರ ಕೋಟಿ ಯನ್ನು ಬರುವ ಜೂನ್‍ಗೆ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ಇದು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಳಲೆ ಕೇಶವಮೂರ್ತಿ ಹೆಬ್ಬೆಟ್ಟಿನ ಶಾಸಕ: ಇಲ್ಲಿನ ಶಾಸಕ ಕಳಲೆ ಕೇಶವಮೂರ್ತಿ ನಮ್ಮ ಪಕ್ಷದಲ್ಲಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೋದರು. ಇಲ್ಲಿನ ಸ್ಥಳಿಯ ನಾಯಕರು ಎರಡು ಬಾರಿ ಸೋತಿದ್ದಾರೆ. ಅಲ್ಲಾದರು ಶಾಸಕರಾಗಲಿ ಹೋಗಲಿ ಬಿಡಿ ಎಂದು ಹೇಳಿದರು. ಆದರೆ ಅವರು ಶಾಸಕರಾಗಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ವಿಫಲಗೊಂಡಿದ್ದಾರೆ. ಒಂದು ಕಡೆ ಸಂಸದರು ಎಳೆದರೆ ಮತ್ತೊಂದು ಕಡೆ ಉಸ್ತುವಾರಿ ಸಚಿವರು ಎಳೆಯುತ್ತಾರೆ. ಪಾಪ ಆತ ಒಬ್ಬ ಹೆಬ್ಬಿಟ್ಟಿನ ಶಾಸಕರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾರ್ಯಕ್ರಮದಲ್ಲಿ ನಂಜನಗೂಡಿನ ಜೆಡಿಎಸ್ ಅಭ್ಯರ್ಥಿ ದಯಾನಂದ ಮೂರ್ತಿ, ಶಾಸಕ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಹೆಜ್ಜಿಗೆ ಎಂ.ಶ್ರೀನಿವಾಸಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿ, ಜೆಡಿಎಸ್ ಮುಖಂಡರಾದ ಬೆಳವಾಡಿ ಶಿವಕುಮಾರ್, ಆರ್.ಸೋಮಸುಂದರ್, ಸಣ್ಣಪ್ಪಗೌಡ, ಆರ್.ವಿ.ಮಹದೇವಸ್ವಾಮಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.