ರಾಜ್ಯದಲ್ಲಿ ಲೋಕಾಯುಕ್ತ ಬಲಿಷ್ಠವಾಗಿದ್ದರೆ ಸಿದ್ದರಾಮಯ್ಯ ಜೈಲಿನಲ್ಲಿರಬೇಕಾಗಿತ್ತು: ಸಿ.ಟಿ. ರವಿ

Update: 2018-03-27 15:36 GMT

ಚಾಮರಾಜನಗರ, ಮಾ. 26: ರಾಜ್ಯದಲ್ಲಿ ಲೋಕಾಯುಕ್ತ ಬಲಿಷ್ಠವಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ 12 ಕ್ಕೂ ಹೆಚ್ಚು ಸಚಿವರು ಜೈಲಿನಲ್ಲಿರಬೇಕಾಗಿತ್ತು. ಈ ಕಾರಣಕ್ಕಾಗಿ ಸಿದ್ದರಾಮಯ್ಯ ಲೋಕಾಯಕ್ತವನ್ನು ಬಲಹೀನ ಮಾಡಿದರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದರು. 

ನಗರದಲ್ಲಿ ಅಮಿತಾ ಶಾ ಪ್ರವಾಸ ಕುರಿತು ಬಿಜೆಪಿ ಪ್ರಮುಖರೊಂದಿಗೆ ಸಭೆ ನಡೆಸಿ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣ ಪ್ರಗತಿಯನ್ನು ಪರಿಶೀಲನೆ ಮಾಡಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ನಾಲ್ವರು ಸಚಿವರು ಜೈಲಿಗೆ ಹೋಗಿದ್ದರು ಎಂದು ಪ್ರಸ್ತಾಪ ಮಾಡಿರುವ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. 

ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರು ಸಹ ಬೇಲ್ ಮೇಲೆ ಹೊರಗಿದ್ದಾರೆ. ಜಾಮೀನು ರದ್ದಾದರೆ ಅವರು ಸಹ ಜೈಲಿಗೆ ಹೋಗಬೇಕಾಗುತ್ತದೆ.  ಇವರ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಎಸಿಬಿಗೆ 84 ದೂರಗಳು ಹೋಗಿವೆ. ಇವೆಲ್ಲವು ಸರಿಯಾಗಿ ತನಿಖೆಯಾಗಿದ್ದರೆ ಸಿದ್ದರಾಮಯ್ಯ ಸಹ ಜೈಲಿನಲ್ಲಿ ಮುದ್ದೆ ಮುರಿಯಬೇಕಾಗಿರುತ್ತಿತ್ತು. ಯಡಿಯೂರಪ್ಪ ಅವರಿಗೆ ಬೇಲ್ ದೊರೆಯದ ಕಾರಣ ಜೈಲಿನಲ್ಲಿದ್ದರು. ಅವರು ಅಪರಾಧಿಯಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅತ್ಮವಲೋಕನ ಮಾಡಿಕೊಳ್ಳಲಿ ಎಂದರು. 

ಇವರ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ವೈ ಮೇಟಿ ಲೈಂಗಿಕ ಹಗರಣದಲ್ಲಿ ಸಿಲುಕಿದ್ದರು. ನೊಂದ ಮಹಿಳೆಯು ಸಹ ದೂರು ನೀಡಿದ್ದರು. ಇಂಥವರಿಗೆ ಎಸಿಬಿ ಕ್ಲಿನ್ ಚಿಟ್ ನೀಡಿದೆ ಎಂದರೆ ಇವರು ಎಸಿಬಿ ಮೂಲಕ ಇನ್ನೂ ಎಂಥ ಕೆಲಸವನ್ನು ಮಾಡಿಸಿರಬಹುದು ಎಂಬುವುದನ್ನು ನೀವೆ ಊಹಿಸಿಕೊಳ್ಳಿ. ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಲೋಕಾಯುಕ್ತವನ್ನು ಕಾರ್ಯಕಲ್ಪ ನೀಡಿ, ಬಲಿಷ್ಠ ಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದರು. 

ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಪರ್ಯಾಯ ಪದಗಳಾದ ಪರಿವಾರ ಮತ್ತು ತಾಳವಾರ ವನ್ನು ಪರಿಶಿಷ್ಟ ಪಂಗಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೇರ್ಪಡೆ ಮಾಡುವ ಮೂಲಕ ಮೂರು ದಶಕಗಳ ಹೋರಾಟಕ್ಕೆ ಜಯ ತಂದು ಕೊಟ್ಟಿದ್ದಾರೆ. ಈ ಎರಡು ಪದಗಳು ರಾಜ್ಯದಲ್ಲಿ ಗೊಂದಲವಾಗಿ ಶಿಕ್ಷಣ, ಉದ್ಯೋಗ, ರಾಜಕೀಯವಾಗಿ ವಂಚಿತವಾಗಿತ್ತು. ಇದನ್ನು ಸಚಿವ ಸಂಪುಟದ ಅನುಮೋದನೆ ಮಾಡಿ ಗೆಜೆಟ್ ಹೊರಟಿಸುವ ಮೂಲಕ ಸಮುದಾಯಗಳ ಅಭಿವೃದ್ದಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯಲಿರುವ ಪರಿಶಿಷ್ಟ ಪಂಗಡಗಳ ಸಮಾವೇಶ ಹೆಚ್ಚು ಮಹತ್ವ ಪಡೆದುಕೊಂಡಿದೆ.  ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ ಎಂದರು ಸಿ.ಟಿ. ರವಿ ತಿಳಿಸಿದರು. 

ಈ ಸಂದರ್ಭದಲ್ಲಿ ಸಂಸದ ಪ್ರತಾಪ್‍ಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಮುಖಂಡರಾದ ನಿಜಗುಣರಾಜು, ಸಿದ್ದರಾಜು, ಅಪ್ಪಣ್ಣ, ದತ್ತೇಶ ಮೊದಲಾದವರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News