×
Ad

ಚಾಮರಾಜನಗರ: ಕಾವೇರಿ ನೀರು ನಿರ್ವಾಹಣಾ ಮಂಡಳಿ ರಚನೆ ವಿರೋಧಿಸಿ ಪ್ರತಿಭಟನೆ

Update: 2018-03-27 22:53 IST

ಚಾಮರಾಜನಗರ, ಮಾ.27: ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಾಹಣ ಮಂಡಳಿ ರಚನೆ ಮಾಡಬಾರದು ಹಾಗೂ ಚಾಮರಾಜನಗರ ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಇಂದು ನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ವಾಟಾಳ್ ನಾಗರಾಜ್ ಅವರ ನಾಯಕತ್ವದಲ್ಲಿ ಜಮಾಯಿಸಿದ್ದ ವಾಟಾಳ್ ಪಕ್ಷದ ಕಾರ್ಯಕರ್ತರು ಕಾವೇರಿ ನೀರು ನಿರ್ವಾಹಣ ಮಂಡಳಿ ಬೇಡ, ಚುನಾವಣಾ ಕಾಯ್ದೆಗೆ ತಿದ್ದುಪಡಿ ಮಾಡಬೇಕು,  ವಾಟಾಳ್ ನಾಗರಾಜ್ ಹೋರಾಟಕ್ಕೆ ಜಯವಾಗಲಿ ಎಂಬ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಕೆಆರ್ ಎಸ್, ಹಾರಂಗಿ, ಹೇಮಾವತಿ, ಕಬಿನಿ, ಕಾವೇರಿ ನದಿಗಳು  ನಮ್ಮ ಕರ್ನಾಟಕದ ಅವಿಭಾಜ್ಯ ಅಂಗ. ಈ ನದಿಗಳನ್ನು ತಮಿಳುನಾಡಿನವರು ತಮ್ಮ ಸ್ವಾಧೀನಕ್ಕೆ ಪಡೆಯಲು ಹೋರಾಟ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣ ಮಂಡಳಿ ರಚನೆ ಮಾಡಬಾರದು. ಮಾಡಿದ್ದೆ ಆದರೆ ರಾಜ್ಯದಲ್ಲಿ ತೀವ್ರ ಚಳುವಳಿ ಆರಂಭಿಸಿ ಸಾವಿರಾರು ಮಂದಿ ಜೈಲ್‍ಬರೋ ಚಳುವಳಿ ಮಾಡುತ್ತೇವೆ. ಅಲ್ಲದೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು. 

ಚಾಮರಾಜನಗರ ಸಮೀಪವಿರುವ ಬದನಗುಪ್ಪೆ ಹಾಗೂ ಚಂದಕವಾಡಿ ಭಾಗಗಳನ್ನು ಉಪನಗರ ಮಾಡಬೇಕು. ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಕಡುಬಡವರಿಗೆ 5ಸಾವಿರ ನೀವೇಶನ ಕೊಡಬೇಕು. ಚಾಮರಾಜನಗರಕ್ಕೆ ಕಾವೇರಿ ಕುಡಿಯುವ ನೀರಿನ 2ನೇ ಹಂತವಾಗಬೇಕು. ಸಮಗ್ರ ಅಭಿವೃದ್ದಿಗೆ  ಸರ್ಕಾರ 5 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿವೆ. ಚುನಾವಣೆಯಲ್ಲಿ ಅಭ್ಯರ್ಥಿಗಳು ಹಣ, ಹೆಂಡ, ಇತ್ಯಾದಿಗಳನ್ನು ಹಂಚುತ್ತಾರೆ. ಯಾವ ಅಭ್ಯರ್ಥಿ ಈ ಕೆಲಸ ಮಾಡುತ್ತಾರೋ ಅವರಿಗೆ 6 ವರ್ಷಗಳ ಕಾಲ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದ ಹಾಗೆ ಶಿಕ್ಷೆ ಕೊಡಬೇಕು. ಚುನಾವಣೆಯಲ್ಲಿ ತೋಳ್ಬಲ, ಹಣಬಲ, ಜಾತಿಬಲ, ಕೆಲಸ ಮಾಡುತ್ತದೆ. ಈ ಅವ್ಯವಸ್ಥೆಯಿಂದ ಚುನಾವಣೆಗೆ ಪ್ರಾಮಾಣಿಕ ಹೋರಾಟಗಾರರು, ಸಮಾಜ ಸೇವಕರು, ಬುದ್ದಿಜೀವಿಗಳು, ಸ್ಪರ್ಧೆ  ಮಾಡುವುದಕ್ಕೆ ಎದರುತ್ತಿದ್ದಾರೆ. ಆದ್ದರಿಂದ ಚುನಾವಣೆ ಕಾಯ್ದೆಗೆ ತಿದ್ದುಪಡಿ ತರಬೇಕು. ತರದಿದ್ದರೆ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದು ವಾಟಾಳ್ ಆತಂಕ ವ್ಯಕ್ತಪಡಿಸಿದರು,

ರಾಜ್ಯದಲ್ಲಿ ಗ್ರಾ.ಪಂ, ತಾ.ಪಂ ಜಿ.ಪಂ, ಸೇರಿದಂತೆ ಶಾಸಕರವರೆಗೂ ಆ ಪಕ್ಷದಿಂದ ಈ ಪಕ್ಷಕ್ಕೆ ಪಕ್ಷಾಂತರ ಆಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಯಾರು ಪಕ್ಷಾಂತರ ಆಗುತ್ತಾರೋ ಅವರನ್ನು  ಜೈಲಿಗೆ ಹಾಕಬೇಕು ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ದಳಪತಿವೀರತಪ್ಪ, ಕಾರ್ ನಾಗೇಶ್, ಸುರೇಶ್‍ನಾಗ್, ನಾಗರಾಜ್ ಮೂರ್ತಿ, ಡೈರಿಮಹದೇವಪ್ಪ, ಕುಮಾರ್, ಚನ್ನಮಲ್ಲಪ್ಪ, ಶಿವಕುಮಾರ್ ಬಸಣ್ಣ, ನಾಗರಾಜ್ ನಾಯಕ್, ಶಿವಲಿಂಗಮೂರ್ತಿ,ವರದರಾಜು, ಮಹೇಶ್, ಲೋಕೇಶ್,  ಸೋಮಣ್ಣ, ಮಲ್ಲಿಕಾರ್ಜುನ, ರಮೇಶ್, ಲಿಂಗನಾಯಕ್ ನಂಜುಂಡಸ್ವಾಮಿ, ಮತ್ತಿತರರರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News