×
Ad

ಇಂದಿನಿಂದಲೇ ನೀತಿ ಸಂಹಿತೆ ಜಾರಿ: ಹಾಸನ ಡಿ.ಸಿ ರೋಹಿಣಿ ಸಿಂಧೂರಿ

Update: 2018-03-27 23:18 IST

ಹಾಸನ,ಮಾ.27: 2018ರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳವಾರದಿಂದಲೇ ನಿತಿ ಸಂಹಿತೆ ಜಾರಿ ಮಾಡಲಾಗಿದೆ. ಮೇ.12ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಮೇ.15ಕ್ಕೆ ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್ 17 ರಂದು ಅಧಿಸೂಚನೆ ಹೊರಡಿಸಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದರು.

ಜಿಲ್ಲೆಯ 7 ವಿಧಾನ ಸಭಾಕ್ಷೇತ್ರಗಳಲ್ಲಿ ಮತಗಟ್ಟೆಯನ್ನು ಸ್ಥಾಪನೆ ಮಾಡಿದ್ದು, ಈಗಾಲೇ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ . ಜಿಲ್ಲೆಯಲ್ಲಿ ಒಟ್ಟು 14,04,319 ಮತದಾರರಿದ್ದು, ಪುರುಷರು 7,09,910 ಹಾಗೂ ಮಹಿಳೆಯರು 6,94,409 ಮತದಾರಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 1,966 ಮತಗಟ್ಟೆಗಳನ್ನು ಸ್ಥಾಪನೆ ಮಾಡಿದ್ದು, ಯಾವುದೇ ಲೋಪವಾಗದಂತೆ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದರು.

ಮಾದರಿ ನೀತಿ ಸಂಹಿತೆ ಜಾರಿಗೆ ಜಿಲ್ಲಾ ಮತ್ತು ತಾಲೂಕು, ಹೋಬಳಿ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಬ್ಯಾನರ್, ಬಂಟಿಂಗ್ಸ್, ಚುನಾವಣಾ ಪ್ರಚಾರ ಸಾಮಾಗ್ರಿಗಳನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದರು. ಚುನಾವಣೆಯನ್ನು ಬಿಗಿಗೊಳಿಸಲು ಅಕ್ರಮ ಹಣ ಸಾಗಾಣಿಕೆ ಮತ್ತು ವ್ಯವಹಾರವನ್ನು ಪತ್ತೆ ಹಚ್ಚಲು ತಂಡ ರಚನೆ ಮಾಡಲಾಗಿದೆ ಎಂದು ಹೇಳಿದರು.

ಪ್ರತಿ 10 -12 ಮತಗಟ್ಟೆಗಳಿಗೆ ಒಬ್ಬರಂತೆ ಸೆಕ್ಟರ್ ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ ಎಂದರು. ಜಿಲ್ಲಾ ಗಡಿ ಮತ್ತು ಆಯಾಕಟ್ಟಿನ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಎಚ್ಚರಿಕೆ ದೃಷ್ಟಿಯಿಂದ 19 ಕಣ್ಗಾವಲು ಪಡೆ ರಚಿಸಲಾಗಿದೆ. ತಾಲೂಕು ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ವಿಡೀಯೋ ವೀಕ್ಷಕರ ತಂಡವನ್ನು ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಮೂವರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು. ಮತದಾರರ ಕುಂದು ಕೊರತೆ ಹಾಗೂ ದೂರು ಸ್ವೀಕರಿಸಲು ಹಾಗೂ ಸಲಹೆ ಸೂಚನೆಗಳನ್ನು ನೀಡಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ 24x7 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಲು ಕಂಟ್ರೋಲ್ ರೂಂ ಸ್ಥಾಪಿಸಿ ಫೋನ್ ಕೊಡಲಾಗಿದ್ದು, ಮತದಾರು ಕರೆ ಮಾಡಬಹುದು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಉಪವಿಭಾಗಧೀಕಾರಿ ನಾಗರಾಜು. ಜಗದೀಶ್ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News