ಹಿಂದುಳಿದ ವರ್ಗಗಳ ಏಳಿಗೆಗೆ ಸಿಎಂ ನಿರ್ಲಕ್ಷ್ಯ: ಈಶ್ವರಪ್ಪ ಟೀಕೆ
ಚಿಕ್ಕಮಗಳೂರು,ಮಾ.27: ಸಿಎಂ ಸಿದ್ದರಾಮಯ್ಯ ಈ ಹಿಂದೆ ನಾನು ಗೋಮಾಂಸ ತಿನ್ನುತ್ತೇನೆ, ಒಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂದವರು ದೇಶದ್ರೋಹಿಗಳು ಎಂದು ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಿದ್ದರು. ಅವರಿಗೆ ಧೈರ್ಯವಿದ್ದರೆ ಗೋಹತ್ಯೆ ಮಾಡಿದವರಿಗೆ, ಹಿಂದೂಗಳ ಕಗ್ಗೊಲೆ ಮಾಡಿದವರಿಗೆ ರಕ್ಷಣೆ ನೀಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಿ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖಂಡ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.
ನಗರಕ್ಕೆ ಮಂಗಳವಾರ ಆಗಮಿಸಿದ್ದ ವೇಳೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್‍ಶಾ ಮತ್ತು ನರೇಂದ್ರಮೋದಿಯವರ ಜೋಡಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿಸಲು ರಣತಂತ್ರ ರೂಪಿಸಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕನ್ನಡಿಗರ ವಿಶ್ವಾಸ ಪಡೆದು ಕರ್ನಾಟಕದಲ್ಲಿ ಜಯಭೇರಿ ಬಾರಿಸಲಿದೆ, ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಬಿ.ಎಸ್.ಯಡಿಯೂರಪ್ಪರವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದ ಅವರು, ಹಿಂದುಳಿದ ವರ್ಗ, ದಲಿತರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ಸಿ.ಎಂ.ಸಿದ್ದರಾಮಯ್ಯರವರು ಆ ಸಮುದಾಯಗಳ ಅಭಿವೃದ್ಧಿಯನ್ನು ಮರೆತರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಆ ಸಮುದಾಯಗಳ ಅಭಿವೃದ್ಧಿಗೆ ಎಲ್ಲ ಸೌಲತ್ತುಗಳನ್ನು ನೀಡಲಾಗಿತ್ತು. ದಲಿತ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಮಠಮಾನ್ಯಗಳಿಗೆ ಬಿಜೆಪಿ ಆಡಳಿತಾವಧಿಯಲ್ಲಿ ಹಣಕಾಸು ನೆರವು ನೀಡಲಾಗಿತ್ತು, ಆದರೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಯಾವುದೇ ನೆರವು ನೀಡದ ಕಾರಣ ಮಠಾಧೀಶರ ಒಕ್ಕೂಟ ಕಾಂಗ್ರೆಸ್ ತೊಲಗಲಿ, ಬಿಜೆಪಿ ಅಧಿಕಾರಕ್ಕೆ ಬರಲಿ ಎನ್ನುತ್ತಿದ್ದಾರೆ ಎಂದರು.
ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಣೆ ಮಾಡಿರುವುದನ್ನು ಸ್ವಾಗತಿಸಿದ ಈಶ್ವರಪ್ಪ ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಬಿಜೆಪಿ ದಿಗ್ವಿಜಯ ಸಾಧಿಸಲಿದೆ. ಕುಲ ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರು ಮತ್ತು ಕ್ರಾಂತಿಕಾರಿ ಸಂಗೊಳ್ಳಿರಾಯಣ್ಣ, ಕವಿಶ್ರೇಷ್ಠ ಕಾಳಿದಾಸನ ಕುಲದಲ್ಲಿ ಹುಟ್ಟಿ ಜಾತಿ ಜಾತಿ ಒಡೆದು ಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮಾಜದ ಪರಮೋಚ್ಚ ನಾಯಕ ಹೇಗೆ ಆಗುತ್ತಾರೆ ಎಂದು ಪ್ರಶ್ನಿಸಿದ ಅವರು, ಅವರಿಗೆ ಮಹನೀಯರ ಹೆಸರು ಹೇಳುವ ಯೋಗ್ಯತೆ ಇಲ್ಲ. ಇಂತಹವರಿಂದ ಸಮಾಜಕ್ಕೆ ಅವಮಾನ ಎಂದರು.
ಕೋಟಿ ಕೋಟಿ ಹಣ ಖರ್ಚು ಮಾಡಿ, ಸಾವಿರಾರು ಅಧಿಕಾರಿಗಳನ್ನು ನೇಮಿಸಿ ಕೈಗೊಂಡ ಜಾತಿ ಸಮೀಕ್ಷೆ ಪಟ್ಟಿಯನ್ನು ಬಹಿರಂಗ ಪಡಿಸದೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ದಲಿತ ಹಾಗೂ ಹಿಂದುಳಿದ ವರ್ಗದ ಜನರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಶಿವಮೊಗ್ಗ ಕ್ಷೇತ್ರದಿಂದ ತಮಗೆ ಟಿಕೇಟ್ ದೊರೆಯಲಿದೆ ಎಂಬ ಭರವಸೆ ಇದೆ. ದೊರೆತರೆ ಸ್ಪರ್ಧಿಸುತ್ತೇನೆ, ದೊರೆಯದಿದ್ದರೆ 224 ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.
ಏ.3ರಂದು ಕನಕದಾಸರ ಕರ್ಮಭೂಮಿ ಕಾಗಿನೆಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಉದ್ಘಾಟಿಸಲಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮವನ್ನು ಶಕ್ತಿಯುತವಾಗಿ ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವುದಾಗಿ ಹೇಳಿದರು.
ಶಾಸಕ ಸಿ.ಟಿ.ರವಿ, ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ರೇಖಾಹುಲಿಯಪ್ಪಗೌಡ, ಮುಖಂಡರಾದ ಬಿ.ರಾಜಪ್ಪ, ವರಸಿದ್ದಿ ವೇಣುಗೋಪಾಲ್, ಸಿ.ಆರ್.ಪ್ರೇಮ್‍ಕುಮಾರ್, ಕೆ.ಎಸ್.ಪುಷ್ಪರಾಜ್ ಇತರರು ಇದ್ದರು.
ಚಾಣಾಕ್ಯ ಬಿಡುವ ಬಾಣ ವಿರೋಧ ಪಕ್ಷದವರಿಗೆ ಗೊತ್ತಾಗಬಾರದು. ಯಾವ ಬಾಣ ಯಾವಾಗ ಬೀಡಬೇಕು ಎಂದು ಚಾಣಕ್ಯ ನಿರ್ಧಾರಿಸುತ್ತಾನೆ ಎಂದು ಈಶ್ವರಪ್ಪ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಯಾವಾಗ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಸರಿಯಾದ ಸಮಯದಲ್ಲಿ ಬಾಣ ಬಿಟ್ಟರೆ ಅದು ಗುರಿ ಸರಿಯಾಗಿ ಸೇರುತ್ತದೆ. ಅವರು ಸರಿಯಾದ ಸಮಯದಲ್ಲಿ ತೀರ್ಮಾನ ತಗೆದುಕೊಳ್ಳುತ್ತಾರೆ ಎಂದರು.
ಬಿಜೆಪಿಯಲ್ಲಿ ಚಾಣಾಕ್ಯ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚಾಣಾಕ್ಯ ಯಾರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅಮಿತ್ ಶಾ ಅಲ್ಲದೆ ಮತ್ಯಾರು ಎಂದು ಉತ್ತರಿಸಿದ ಅವರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನಿರ್ದೇಶನದಂತೆ ಪಕ್ಷ ಕೆಲಸ ಮಾಡಲಿದೆ. ಬಿಜೆಪಿ ಸ್ಪಷ್ಟ ಬಹುಮತ ಪಡೆದು ಬಿ.ಎಸ್.ಯಡಿಯೂರಪ್ಪರವರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.ರಾಹುಲ್ ಗಾಂಧಿ ಓರ್ವ ಮುಗ್ದ ಬಾಲಕ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಓರ್ವ ಮುಗ್ದ ಬಾಲಕ. ಎನ್‍ಸಿಸಿ ಎಂದರೆ ಏನು ಎಂಬುದು ತಿಳಿಯದ ಬಾಲಕ. ಅವರು ಏನು ಮಾತನಾಡುತ್ತೇನೆ ಎಂಬುದೇ ತಿಳಿದಿರುವುದಿಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದರಲ್ಲಿ ಅರ್ಥವಿಲ್ಲ. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ನಮ್ಮ ಎದುರಾಳಿ. ಕಾಂಗ್ರೆಸ್ ಸೋಲಬೇಕು ನಾವು ಗೆಲ್ಲಬೇಕು ಎಂಬುದೆ ನಮ್ಮ ಗುರಿ ಎಂದ ಅವರು, ರಾಹುಲ್ ಗಾಂಧಿ ರಾಜ್ಯದ 224 ಕ್ಷೇತ್ರಗಳಿಗೂ ಭೇಟಿ ನೀಡಬೇಕು. ಅವರು ಕಾಲಿಟ್ಟ ಕಡೆಯಲ್ಲಿ ಕಾಂಗ್ರೆಸ್ ಭಸ್ಮವಾಗುತ್ತದೆ. ರಾಹುಲ್ ಗಾಂಧಿ ಎಲ್ಲ ಕ್ಷೇತ್ರಗಳಿಗೂ ಹೊಗಬೇಕು ಎಂಬುದು ನಮ್ಮ ಆಸೆ ಎಂದು ಇದೇ ವೇಳೆ ಈಶ್ವರಪ್ಪ ವ್ಯಂಗ್ಯವಾಡಿದರು.