ಯೋಧರಿಗೆ ತೋರಿಕೆಗಾಗಿ ಗೌರವ ತೋರಿಸಿದರೆ ಸಾಕೇ?

Update: 2018-03-27 18:30 GMT

ಮಾನ್ಯರೇ,
ಪಾಕಿಸ್ತಾನ ಮತ್ತು ಚೀನಾದಂತ ಹಿತ ಶತ್ರು ರಾಷ್ಟ್ರಗಳು ನಮ್ಮ ಅಕ್ಕ ಪಕ್ಕದಲ್ಲಿಯೇ ಇದ್ದರು ಕೂಡಾ ಇಂದು ನಾವು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದರೆ ಇದಕ್ಕೆ ಕಾರಣ ನಮ್ಮ ಹೆಮ್ಮೆಯ ವೀರ ಯೋಧರು. ಮಳೆ ಚಳಿ ಬಿಸಿಲು ಗಾಳಿ ಲೆಕ್ಕಿಸದೇ ದಿನದ ಇಪ್ಪತ್ನಾಲ್ಕು ಘಂಟೆಯೂ ಮೈಯೆಲ್ಲ ಕಣ್ಣಾಗಿಸಿಕೊಂಡು ಗಡಿಯಲ್ಲಿ ನಿಂತು ವೈರಿ ಪಡೆ ದೇಶದೊಳಗೆ ನುಸುಳದಂತೆ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶ ಇಂದು ಸುರಕ್ಷಿತವಾಗಿ ಮುನ್ನಡೆಯುತ್ತಿದೆ ಎಂದರೆ ಗಡಿ ಪ್ರದೇಶಗಳಲ್ಲಿ ಕಾವಲು ಕಾಯುವ ಯೋಧರಿಂದ ಮಾತ್ರ. ಹೀಗಿರುವಾಗ ನಮ್ಮ ದೇಶಕ್ಕೆ ಕಣ್ಣಾಗಿರುವ ಯೋಧರನ್ನು ಗೌರವಿಸಬೇಕಾದದ್ದು ಸರಕಾರ ಮತ್ತು ಪ್ರತಿಯೊಬ್ಬ ಭಾರತೀಯರ ಆದ್ಯ ಕರ್ತವ್ಯ.

 ಕೇಂದ್ರ ಸರಕಾರ ಇಂದು ಯೋಧರ ಕುರಿತು ಅಷ್ಟೇನೂ ಕಾಳಜಿ ವಹಿಸುತ್ತಿಲ್ಲ. ಕೇವಲ ತೋರಿಕೆಗಾಗಿ ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳು ‘ಜೈ ಜೈವಾನ್’ ಎಂದು ಜೈಕಾರ ಹಾಕುತ್ತಿದ್ದಾರೆ ಹೊರತು ನಿವೃತ್ತ್ತ ಯೋಧರಿಗೆ ಮತ್ತು ಕರ್ತವ್ಯದಲ್ಲಿ ಹುತಾತ್ಮರಾದ ಯೋಧ ಕುಟುಂಬಗಳ ಸಮಸ್ಯೆಗಳಿಗೆ ಸ್ಪಂದನ ಸಿಗುತ್ತಿಲ್ಲ. ಬರಬೇಕಾದ ಸಕಲ ಸೌಲಭ್ಯಗಳು ದೊರಕುತ್ತಿಲ್ಲ. ಇದಕ್ಕೆ ನಿದರ್ಶನವೆಂಬಂತೆ ನಾಲ್ಕು ವರ್ಷಗಳ ಹಿಂದೆ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ಅರಣ್ಯದಲ್ಲಿ ನಕ್ಸಲರ ಗುಂಡಿನ ದಾಳಿಗೆ ತೀವ್ರ ಗಾಯಗೊಂಡಿದ್ದ ಮಧ್ಯ ಪ್ರದೇಶದ ಮೊರೆನಾ ಮೂಲದ ಮನೋಜ್ ತೋಮರ್ ಎಂಬ ಸಿಆರ್‌ಪಿಎಫ್ ನಿವೃತ್ತ ಯೋಧ ಇಂದಿಗೂ ಸರಕಾರದಿಂದ ಸರಿಯಾದ ಚಿಕಿತ್ಸೆ ಸಿಗದೆ ದೇಹದಿಂದ ಹೊರಬಂದಿರುವ ಕರುಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಕೊಂಡು ಸೂಕ್ತ ಚಿಕಿತ್ಸೆಗಾಗಿ ನಿತ್ಯ ಅಲೆದಾಡುತ್ತಿದ್ದಾರೆ. ಈ ಯೋಧನ ಅಸಹಾಯಕ ಸ್ಥಿತಿ ಇಡೀ ದೇಶವನ್ನೇ ತಲೆ ತಗ್ಗಿಸುವಂತೆ ಮಾಡಿದೆ.

16 ವರ್ಷಗಳ ಕಾಲ ದೇಶಕ್ಕಾಗಿ ದುಡಿದು ತನ್ನ ಶರೀರದ ಅಂಗಾಂಗಗಳನ್ನು ಕಳೆದುಕೊಂಡು ನಿತ್ಯ ಸಂಕಷ್ಟ ಅನುಭವಿಸುತ್ತಿರುವ ಯೋಧನಿಗೆ ಸರಕಾರ ಮತ್ತು ಜನಪ್ರತಿನಿಧಿಗಳು ಕೊಡುವ ಗೌರವ ಇದೇನಾ?

ಆದ್ದರಿಂದ ಸರಕಾರ ಯೋಧರ ಬಗ್ಗೆ ಕೇವಲ ತೋರಿಕೆಗಾಗಿ ಗೌರವ ತೋರಿಸದೆ ಸಂಕಷ್ಟದಲ್ಲಿರುವ ಹುತಾತ್ಮ ಮತ್ತು ನಿವೃತ್ತ ಯೋಧರ ಕುಟುಂಬಗಳ ಸಮಸ್ಯೆಗಳನ್ನು ಆಲಿಸಲಿ. ಅಲ್ಲದೆ ಸರಕಾರದಿಂದ ಸಿಗಬೇಕಾದ ಎಲ್ಲಾ ಮೂಲ ಭೂತ ಸೌಕರ್ಯಗಳನ್ನು ಒದಗಿಸಿ ಸಮಾಜದಲ್ಲಿ ಯೋಧರ ಕುಟುಂಬ ಗೌರವಯುತವಾಗಿ ಬದುಕುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರ ಪ್ರಯತ್ನಿಸಲಿ.

Writer - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Editor - -ಮೌಲಾಲಿ ಕೆ. ಬೋರಗಿ, ಸಿಂದಗಿ

contributor

Similar News