×
Ad

ಮೈಸೂರು: ವಿಜೃಂಭಣೆಯಿಂದ ಜರುಗಿದ ಶ್ರೀಕಂಠೇಶ್ವರಸ್ವಾಮಿ ಗೌಥಮ ಪಂಚಮಹಾ ರಥೋತ್ಸವ

Update: 2018-03-28 20:18 IST

ಮೈಸೂರು,ಮಾ.28: ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಶ್ರೀಕಂಠೇಶ್ವರಸ್ವಾಮಿಯವರ ಗೌತಮ ಪಂಚಮಹಾರಥೋತ್ಸವ ಧಾರ್ಮಿಕ ಸಂಪ್ರದಾಯಗಳೊಂದಿಗೆ ವಿಜೃಂಭಣೆಯಿಂದ ಜರುಗಿತು.

ಶ್ರೀಶ್ರೀಕಂಠೇಶ್ವರಸ್ವಾಮಿಯವರ ರಥೋತ್ಸವ ಬುಧವಾರ ಬೆಳಿಗ್ಗೆ 6.05ರಿಂದ 6.20 ರೊಳಗಿನ ಮೀನಲಗ್ನದಲ್ಲಿ ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಶಿವಕುಮಾರ್ ಹಾಗೂ ಶಾಸಕ ಕಳಲೆ ಕೇಶವಮೂರ್ತಿ ಚಕ್ರಕ್ಕೆ ತೆಂಗಿನಕಾಯಿ ಒಡೆಯುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.

ನಂಜನಗೂಡು ಕ್ಷೇತ್ರ ಪಂಚ ಮಹಾರಥಗಳನ್ನು ಎಳೆಯುವ ಏಕೈಕ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಪಟ್ಟಣದ ಎಲ್ಲೆಡೆ ಸಂಭ್ರಮ, ಸಡಗರ ಕಂಡುಬಂದಿತ್ತು. ಸಾವಿರಾರು ಭಕ್ತರು ರಥದ ಮೇಲೆ ಹೂವು-ದವನ, ಬಾಳೆಹಣ್ಣು ಎಸೆದು ಶ್ರೀಕಂಠೇಶ್ವರನಿಗೆ ಜಯವಾಗಲಿ, ಓಂ ನಮ: ಶಿವಾಯ ಜೈ ಜೈ ಶ್ರೀಕಂಠ ಎಂಬ ಘೋಷಣೆಗಳನ್ನು ಕೂಗಿದರು.

ಶ್ರೀಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಮಣ್ಯ, ಹಾಗೂ ಚಂಡಿಕೇಶ್ವರ ರಥಗಳನ್ನು ಈ ಸಂದರ್ಭದಲ್ಲಿ ಎಳೆಯಲಾಯಿತು. ನವರತ್ನಗಳು ಹೂ ಗಳಿಂದ ಕೂಡಿದ್ದ ಶ್ರೀಶ್ರೀಕಂಠೇಶ್ವರಸ್ವಾಮಿಯವರನ್ನು ಸಿಂಗರಿಸಿ ರಥದಲ್ಲಿ ಇರಿಸಿಲಾಗಿತ್ತು. ಶ್ರೀಕಂಠೇಶ್ವರ ದೇವಾಲಯವನ್ನು ವಿದ್ಯುತ್ ದೀಪಗಳಿಂದ, ಅಲಂಕರಿಸಲಾಗಿತ್ತು.

ಪಟ್ಟಣದ ರಸ್ತೆಗಳನ್ನು, ವೃತ್ತಗಳನ್ನು ಹೂವು ಮತ್ತು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು, ಪ್ರತಿಯೊಂದು ಮನೆಮುಂದೆ ರಂಗೋಲಿಯನ್ನು ಬಿಡಿಸಿ, ಹಸಿರು ತೋರಣವನ್ನು ಕಟ್ಟಿದ್ದರಿಂದ ಮತ್ತಷ್ಟು ಮೆರೆಗು ಕಂಡು ಬಂತು. ಜಾತ್ರೆಗೆ ಬಂದಿದ್ದ ಭಕ್ತರಿಗೆ ಹಲವಾರು ಸಂಘ ಸಂಸ್ಥೆಗಳಿಂದ ಮಜ್ಜಿಗೆ-ಪಾನಕ-ನೀರು-ಲಾಡು-ಪ್ರಸಾದ ಬಾತ್, ಮೊಸರನ್ನ, ಪುಳಿಯೊಗರೆ, ಬಿಸಿಬೇಳೆ ಬಾತ್ ನೀಡಲಾಯಿತು. ಕೆಲವರು ಅನ್ನಸಂತರ್ಪಣೆಯನ್ನು ನಡೆಸಿದರು. 

ವಿವಿಧೆಡೆಗಳಿಂದ ಬಂದ ನವ ಜೋಡಿಗಳು, ಪಂಚರಥಗಳಿಗೆ ಹಣ್ಣು ದವನ ಎಸೆದು ಕೃತಾರ್ಥರಾದರು, ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಜಿಲ್ಲಾಡಳಿತ, ಮುಜರಾಯಿ ಇಲಾಖೆ, ನಗರಸಭೆ ಎಲ್ಲಾ ಸೌಲಭ್ಯಗಳನ್ನು ನೀಡಿತ್ತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News