ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧೆ ಮಾಡುವುದೇ ಅನುಮಾನ: ಎಚ್.ಡಿ ಕುಮಾರಸ್ವಾಮಿ
ಮೈಸೂರು,ಮಾ.28: ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲುವುದೇ ಅನುಮಾನ. ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವವರೆಗೂ ಅವರ ಸ್ಪರ್ಧೆ ಖಚಿತಪಡಿಸಲಾಗದು. ಒಂದು ವೇಳೆ ಅವರು ಸ್ಪರ್ಧೆಮಾಡಿದರೆ ನಾವು ಏನು ಎಂದು ಜೆಡಿಎಸ್ ಕಾರ್ಯಕರ್ತರು ತೋರಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸುತ್ತೂರು ಮಠಕ್ಕೆ ಬುಧವಾರ ಬೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣಾ ದಿನಾಂಕ ಘೋಷಣೆಯಾಗಿದೆ. ನಾಮಪತ್ರ ಸಲ್ಲಿಸುವವರೆಗೂ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದೇ ಅನುಮಾನ. ಸಿಎಂ ಎಲ್ಲಿ ಬೇಕಾದರೂ ನಿಂತು ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಂತರೆ ಸಿದ್ದರಾಮಯ್ಯ ಸೋಲು ಖಚಿತ. ಈ ಬಗ್ಗೆ ಮಾತನಾಡಲು ಚುನಾವಣಾ ಫಲಿತಾಂಶ ದಿನ ಮೈಸೂರಿಗೆ ಬರುತ್ತೇನೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅಧಿಕಾರ ಮತ್ತು ಹಣದ ಮದದಿಂದ ಒಂದು ಓಟಿಗೆ 500 ರಿಂದ 1 ಸಾವಿರ ರೂ. ಕೊಡಲು ಸಿದ್ಧರಾಗಿದ್ದಾರೆ. ಈ ರೀತಿ ಹಣ ಹಂಚಿ ಚುನಾವಣೆ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿದ್ದಾರೆ. ಈ ಬಾರಿ ಚುನಾವಣಾ ಆಯೋಗ ಕೆಂಪಯ್ಯನವರ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಈ ಬಾರಿ ಮೈಸೂರು, ಮಂಡ್ಯ, ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗೆಲಲ್ಲಿದೆ. ಸಿಎಂ ಸಿದ್ದರಾಮಯ್ಯ ಈ ಬಾರಿ ಜೆಡಿಎಸ್ 25 ಸ್ಥಾನ ಗೆಲಲ್ಲಿದೆ ಎಂದಿದ್ದಾರೆ. ಆದರೆ ಈ ಮೂರು ಜಿಲ್ಲೆಗಳಲ್ಲೇ ಜೆಡಿಎಸ್ 25 ಸ್ಥಾನ ಗೆದ್ದು ಉತ್ತರ ನೀಡಲಿದೆ. ನಿನ್ನೆ ಅಮಿತ್ ಶಾ ನಂಬರ್ ವನ್ ಭ್ರಷ್ಟ ಸರ್ಕಾರ ಯಡಿಯೂರಪ್ಪನವರದ್ದು ಎಂದು ಹೇಳಿರುವುದು ಅವರ ಅಂತರಾಳದ ಮಾತಾಗಿದ್ದು, ಸತ್ಯವನ್ನು ಅವರೇ ಒಪ್ಪಿಕೊಂಡಂತಾಗಿದೆ ಎಂದರು.
ಈ ಬಾರಿಯ ಚುನಾವಣೆ ಪ್ರಮುಖ ಚುನಾವಣೆಯಾಗಿರುವುದರಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚಿಂತಿಸಿದ್ದು, ನನ್ನ ಕರ್ಮಭೂಮಿ ರಾಮನಗರ ಒಂದು ಕ್ಷೇತ್ರವಾಗಿದ್ದು, ಇನ್ನೊಂದು ಕ್ಷೇತ್ರವನ್ನು ಪಕ್ಷದೊಳಗೆ ಚರ್ಚಿಸಿ ಇನ್ನೊಂದು ವಾರದಲ್ಲಿ ತಿಳಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.