×
Ad

ಕಾವೇರಿ ನದಿಯಲ್ಲಿ ರಿವರ್ ರ್‍ಯಾಫ್ಟಿಂಗ್‌ ನಿಷೇಧ ಮುಂದುವರಿಕೆ: ಜಿಲ್ಲಾಧಿಕಾರಿ ಆದೇಶ

Update: 2018-03-28 21:55 IST

ಮಡಿಕೇರಿ, ಮಾ.28: ಕಾವೇರಿ ನದಿಯ ವಿವಿಧ ಭಾಗದಲ್ಲಿ ರಿವರ್ ರ್‍ಯಾಫ್ಟಿಂಗ್‌ ಹೆಸರಿನಲ್ಲಿ ಅನಧಿಕೃತ ದಂಧೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾವೇರಿ ನದಿ ಮತ್ತು ಇನ್ನಿತರ ಭಾಗಗಳಲ್ಲಿ ರಿವರ್ ರ್‍ಯಾಫ್ಟಿಂಗ್‌ ಉದ್ದಿಮೆ ನಡೆಸುವುದಕ್ಕೆ ಎ.28 ರ ವರೆಗೆ ನಿಷೇಧಾಜ್ಞೆ ಮುಂದುವರಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.   

ಸಾರ್ವಜನಿಕರ ಜಿಲ್ಲೆಯಾದ್ಯಂತ ಕಾವೇರಿ ನದಿಪಾತ್ರದಲ್ಲಿ ರಿವರ್ ರ್‍ಯಾಫ್ಟಿಂಗ್‌ ಉದ್ದಿಮೆ ನಡೆಸುವುದನ್ನು ಏ.28ರ ವರೆಗೆ ಸಂಪೂರ್ಣವಾಗಿ ನಿಷೇಧಿಸಿ ಮುಂದಿನ ಆದೇಶದವರೆಗೆ ಕಾಯ್ದಿರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.  

ರಿವರ್ ರ್‍ಯಾಫ್ಟಿಂಗ್‌ ಉದ್ದಿಮೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದಾಗಿ ಸಂಬಂಧಪಟ್ಟವರಿಂದ ವರದಿ ಬಂದಿದ್ದು, ಈ ಪ್ರಕರಣವು ಮುಂದಿನ ವಿಚಾರಣೆಗಾಗಿ ಕೈಗೆತ್ತಿಕೊಳ್ಳಲಾಗಿ ಪ್ರತಿವಾದಿಗಳಿಂದ ಲಿಖಿತ ಸಮಜಾಯಿಷಿಕೆ ನೀಡಲು ಮತ್ತು ದಾಖಲೆಗಳನ್ನು ಸಲ್ಲಿಸಲು ನಿಗಧಿ ಪಡಿಸಿರುವ ಪ್ರಕಾರ ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭ 30 ಪ್ರತಿವಾದಿಗಳು ಹಾಜರಾಗಿ ಕೆಲವು ದಾಖಲಾತಿಗಳೊಂದಿಗೆ ಲಿಖಿತ ಸಮಜಾಯಿಷಿಕೆ ಸಲ್ಲಿಸಿದ್ದಾರೆ.

ಪ್ರತಿವಾದಿಗಳು ಸಲ್ಲಿಸಿರುವ ದಾಖಲೆಗಳಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ವರದಿ ಪಡೆಯದೇ ಅಂತಿಮ ತೀರ್ಮಾನ ಕೈಗೊಳ್ಳುವುದು ನ್ಯಾಯಾಂಗ ವಿಚಾರಗಳಲ್ಲಿ ಸಮಂಜಸವಾಗಿರುವುದಿಲ್ಲ. ಆದ್ದರಿಂದ, ಸಂಬಂಧಪಟ್ಟ ಇಲಾಖಾಧಿಕಾರಿಗಳ ವರದಿ ಪಡೆಯಬೇಕಾಗಿದ್ದು, ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಕಾವೇರಿ ನದಿಯ ಪಾತ್ರಗಳಲ್ಲಿ ರಿವರ್ ರ್‍ಯಾಫ್ಟಿಂಗ್‌ ಉದ್ದಿಮೆ ನಡೆಸುವುದನ್ನು ಕಳೆದ ಒಂದು ತಿಂಗಳಿನಿಂದ ನಿಷೇಧಿಸಿದ್ದು, ಈ ಆದೇಶವನ್ನು ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News