ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವಂತೆ ಸೂಚಿಸಿದರೆ ಸ್ಪರ್ಧಿಸುತ್ತೇನೆ: ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ
ಶಿವಮೊಗ್ಗ, ಮಾ. 28: 'ಮುಂಬರುವ ಲೋಕಸಭೆ ಚುನಾವಣೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ತಾನು ತಯಾರಿ ನಡೆಸುತ್ತಿದ್ದೇನೆ. ಒಂದು ವೇಳೆ ಪಕ್ಷದ ವರಿಷ್ಠರು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವಂತೆ ಸೂಚಿಸಿದರೆ ಸ್ಪರ್ಧಿಸುತ್ತೇನೆ. ವರಿಷ್ಠರ ನಿರ್ಧಾರದಂತೆ ಮುನ್ನಡೆಯುತ್ತೇನೆ' ಎಂದು ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪ ವಿರುದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿಯವರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತಿಸುತ್ತಿದ್ದಾರೆಂಬ ವಿಷಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತಂತೆ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ.
ಆದರೆ ಶಿಕಾರಿಪುರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತಂತೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ. 'ತಾನು ಶಿಕಾರಿಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ. ಆದರೆ ಪಕ್ಷದ ವರಿಷ್ಠರು ಸೂಚಿಸಿದರೆ ಶಿವಮೊಗ್ಗ ಜಿಲ್ಲೆಯ ಯಾವ ಕ್ಷೇತ್ರದಿಂದ ಬೇಕಾದರೂ ಕಣಕ್ಕಿಳಿಯಲು ಸಿದ್ದ' ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಚರ್ಚಿಸಿದ್ದೇನೆ: 'ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿನ ಪಕ್ಷದ ಚಟುವಟಿಕೆ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷನೂ ಆಗಿರುವುದರಿಂದ, ಆಗಾಗ್ಗೆ ಮುಖ್ಯಮಂತ್ರಿ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿರುತ್ತೇನೆ. ಇದರಲ್ಲಿ ಅಂತಹ ವಿಶೇಷವಿಲ್ಲ ಎಂದು ತಿಳಿಸಿದ್ದಾರೆ.
ಶಿಕಾರಿಪುರ ಕ್ಷೇತ್ರದಿಂದ ತನ್ನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತಂತೆ ಸಿಎಂ ನಿರ್ಧರಿಸಿದ್ದಾರೆಂಬ ಮಾಹಿತಿಯ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ. ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿಯಬೇಕೆಂಬುವುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಲಿದ್ದಾರೆ ಎಂದು ಹೇಳಿದ್ದಾರೆ.
ಉತ್ತಮ ಸಾಧನೆ: ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಲಿದೆ. ಅತ್ಯಧಿಕ ಸ್ಥಾನಗಳಲ್ಲಿ ಜಯ ಸಂಪಾದಿಸಲಿದೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಜನಪರ ಆಡಳಿತಕ್ಕೆ ಜಿಲ್ಲೆಯ ಮತದಾರರು ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.