ಆಶ್ರಯ ಮನೆ ಹಂಚಿಕೆಯಲ್ಲಿ ಭಾರೀ ಗೋಲ್ ಮಾಲ್: ಆರೋಪ
ಮೈಸೂರು,ಮಾ.29: ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ಮನೆ ಹಂಚಿಕೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಪಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಮಾರು 6 ಕೋಟಿ. ರೂ. ಹಣ ದುರುಪಯೋಗವಾಗಿದೆ ಎಂದು ದಾಖಲೆ ಸಹಿತ ಹಗರಣವನ್ನು ಬಯಲಿಗೆಳೆದರು. ಚುನಾವಣೆ ಘೋಷಣೆ ಬೆನ್ನಲ್ಲೇ ರಾತ್ರೋರಾತ್ರಿ ಆಶ್ರಯ ಮನೆಗಳ ಮಂಜೂರಾತಿ ಪತ್ರ ವಿತರಣೆ ಮಾಡಲಾಗಿದೆ. ಹಗರಣದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ನೇರ ಭಾಗಿಯಾಗಿದ್ದಾರೆ ಎಂದು ಸೋಮಶೇಖರ್ ವಿರುದ್ಧ ಮಾಜಿ ಸಚಿವ ರಾಮದಾಸ್ ಗಂಭೀರ ಆರೋಪ ಮಾಡಿದರು.
ಆಶ್ರಯ ಮನೆಗಳ ಮಂಜೂರಾತಿ ಪತ್ರಗಳನ್ನು ಹಣಕ್ಕೆ ಮಾರಿಕೊಳ್ಳುವ ಮೂಲಕ ಶಾಸಕರು ಚುನಾವಣೆ ಖರ್ಚಿಗೆ ಹಣ ವಸೂಲಿಗೆ ಇಳಿದಿದ್ದಾರೆ. ಈಗಾಗಲೇ 1.40 ಕೋಟಿ ಹಣವನ್ನು ಲಂಚ ರೂಪದಲ್ಲಿ ಪಡೆಯಲಾಗಿದೆ ಎಂದು ಆರೋಪಿಸಿದರು.
ಇದಲ್ಲದೆ ಆಶ್ರಯ ಸಮಿತಿ ಸದಸ್ಯರಿಗೆ, ಶಾಸಕರ ಆಪ್ತ ಸಹಾಯಕರಿಗೆ, ಶಾಸಕರ ಮಾಲೀಕತ್ವದ ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕರ ಸಂಬಂಧಿಗಳಿಗೆ ಅಕ್ರಮವಾಗಿ ಆಶ್ರಯ ಮನೆ ಹಂಚಿಕೆಯಾಗಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಮನೆ ಮಂಜೂರಾತಿ ಪತ್ರ ವಿತರಣೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಕುರಿತು ಶಾಸಕ ಎಂ.ಕೆ. ಸೋಮಶೇಖರ್ ವಿರುದ್ಧ ಎಸಿಬಿ ಗೆ ದೂರು ನೀಡಿ ಸೂಕ್ತ ತನಿಖೆಗೆ ಒತ್ತಾಯಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಪ್ರಧಾನ ಮಂತ್ರಿ ಆವಾಜ್ ಯೋಜನೆಯ ವಾಜಪೇಯಿ ನಗರೋತ್ಥಾನ ಯೋಜನೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಮೈಸೂರಿನ ಕೆಆರ್, ಎನ್ ಆರ್, ಚಾಮರಾಜ ಕ್ಷೇತ್ರದಲ್ಲಿ ಕೇಂದ್ರದ ಗೃಹ ನಿರ್ಮಾಣದ ಇಲಾಖೆಯ ಮಾನದಂಡ ವಿರುದ್ಧವಾಗಿ ಮನೆ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಶಾಸಕರ ಆಪ್ತರು ಹಣ ವಸೂಲಿ ಮಾಡಿ ಮನೆ ಮಂಜೂರಾತಿ ಮಾಡುತ್ತಿದ್ದಾರೆ. ಈಗಾಗಲೇ 7 ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿ ಬಡವರಿಗೆ ಅನ್ಯಾಯ ಮಾಡಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಜೋಗಿ ಮಂಜು, ರಾಜೇಂದ್ರ, ವಡಿವೇಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.