ಮಡಿಕೇರಿ: ಚಿನ್ನಾಭರಣ, ನಗದು ಕಳ್ಳತನ; ಆರೋಪಿಯ ಬಂಧನ

Update: 2018-03-29 16:39 GMT

ಮಡಿಕೇರಿ, ಮಾ.29: ಮಕ್ಕಂದೂರು ಗ್ರಾಮದ ಮನೆಯೊಂದರಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ತಲೆ ಮರೆಸಿಕೊಂಡಿದ್ದ ಚೋರನನ್ನು ಪ್ರಕರಣ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಭೂದೇಶ್ ಅಲಿಯಾಸ್ ಭೂದಪ್ಪ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತನಿಂದ ಸುಮಾರು ರೂ.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ.3 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ
ಮಕ್ಕಂದೂರು ನಿವಾಸಿ ರವಿ ಕಾಳಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಂದೆಯವರನ್ನು ನೋಡಿಕೊಳ್ಳಲೆಂದು ಮೈಸೂರು ಹೆಲ್ತ್ ಅಂಡ್ ವೆಲ್‍ನೆಸ್ ಹೆಲ್ತ್ ಕೇರ್ ಸರ್ವಿಸಸ್ ನ ಮೂಲಕ ಭೂದೇಶ್ ಅಲಿಯಾಸ್ ಭೂದಪ್ಪ ನನ್ನು ಕಳೆದ 20 ದಿನಗಳಿಂದ ಮನೆಯಲ್ಲಿರಿಸಿಕೊಂಡಿದ್ದರು. ಇದೇ ಮಾ.26 ರಂದು ರವಿಕಾಳಪ್ಪ ಅವರು ಮಗಳನ್ನು ನೋಡಿಕೊಂಡು ಬರಲೆಂದು ಮಂಗಳೂರಿಗೆ ತೆರಳಿದ್ದ ಸಂದರ್ಭದ ಲಾಭ ಪಡೆದ ಭೂದೇಶ್ ಮನೆಯಲ್ಲಿ ವೃದ್ಧ ದಂಪತಿಗಳು ಮಾತ್ರ ಇರುವುದನ್ನು ಮನಗಂಡು ಬೀರುವಿನಲ್ಲಿಡಲಾಗಿದ್ದ 4.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ರೂ.20 ಸಾವಿರ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. 

ವಿಷಯ ತಿಳಿದ ರವಿಕಾಳಪ್ಪ ಅವರು ಮಾ.27 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರಪ್ರಸಾದ್ ಅವರ ನಿರ್ದೇಶನದಂತೆ ಡಿವೈಎಸ್‍ಪಿ ಕೆ.ಎಸ್.ಸುಂದರ್‍ರಾಜ್ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಮಡಿಕೇರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕರಾದ ಸಿದ್ಧಯ್ಯ, ಠಾಣಾಧಿಕಾರಿ ಯತೀಶ್.ಎನ್, ಉಪನಿರೀಕ್ಷಕರಾದ ವಿ.ಚೇತನ್, ಸಿಬ್ಬಂದಿಗಳಾದ ಇಬ್ರಾಹಿಂ, ತೀರ್ಥಕುಮಾರ್, ಶಿವರಾಜೇಗೌಡ, ವೀಣಾ, ಚಾಲಕರುಗಳಾದ ಅರುಣ್ ಕುಮಾರ್, ಮನೋಹರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಕರಣ ನಡೆದ 24 ಗಂಟೆಯೊಳಗೆ ಚೋರನನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳ ತಂಡಕ್ಕೆ ಎಸ್‍ಪಿ ರಾಜೇಂದ್ರ ಪ್ರಸಾದ್ ಅವರು ಬಹುಮಾನ ಘೋಷಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News