×
Ad

ಧಾರವಾಡ: ಅನುಮಾನಾಸ್ಪದ ಬ್ಯಾಂಕ್ ವ್ಯವಹಾರದ ಮೇಲೆ ನಿಗಾವಹಿಸಲು ಬ್ಯಾಂಕುಗಳಿಗೆ ಸೂಚನೆ

Update: 2018-03-29 22:44 IST

ಧಾರವಾಡ, ಮಾ.29: ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಬ್ಯಾಂಕುಗಳ ಮೂಲಕ ನಡೆಯಬಹುದಾದ ಅನುಮಾನಾಸ್ಪದ ವ್ಯವಹಾರಗಳು, ಹಣ ಪಡೆಯುವ ಹಾಗೂ ಠೇವಣಿ ಇಡುವವರ ಬಗ್ಗೆ ಎಲ್ಲ ಬ್ಯಾಂಕುಗಳು ಕಾಲ ಕಾಲಕ್ಕೆ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದ್ದಾರೆ.

ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್‌ಟಿಜಿಎಸ್, ನೆಫ್ಟ್ ಮತ್ತಿತರ ಇ-ಪೇಮೆಂಟ್ ವಿಧಾನಗಳ ಮೂಲಕ ಕೆಲವು ವ್ಯಕ್ತಿಗಳ ಖಾತೆಗಳಿಗೆ ನಿಯಮಿತವಾಗಿ ಹಣ ವರ್ಗಾವಣೆಯಾಗುತ್ತಿದ್ದರೆ, 1 ಲಕ್ಷ ರೂ.ಗಳಿಗಿಂತಲೂ ಅಧಿಕ ಹಣವನ್ನು ರಾಜಕೀಯ ಪಕ್ಷಗಳ ಖಾತೆಗಳಿಂದ ಪಡೆದರೆ ಆ ಬಗ್ಗೆ ಮಾಹಿತಿ ನೀಡಿ, ಅದು ಮತದಾರರಿಗೆ ಆಮಿಷವೊಡ್ಡಲು ಬಳಕೆಯಾಗುವದನ್ನು ತಡೆಯಬೇಕು ಎಂದರು.

ಅಭ್ಯರ್ಥಿಗಳು ಹಾಗೂ ಅವರ ಪತ್ನಿ/ಪತಿ ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿ 1 ಲಕ್ಷ ರೂ.ಗಳಿಗಿಂತಲೂ ಅಧಿಕ ಹಣ ಇದ್ದರೆ ಅದನ್ನು ಚುನಾವಣಾ ಆಯೋಗದ ವೆಬ್‌ಸೈಟ್ ಮೂಲಕ ಪಡೆದು ನಿಗಾ ಇಡಬೇಕು ಎಂದು ಬೊಮ್ಮನಹಳ್ಳಿ ಸೂಚನೆ ನೀಡಿದರು.

ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಹೊಸ ಖಾತೆ ತೆರೆಯಬೇಕಾಗುವುದರಿಂದ ಅವರಿಗೆ ಆದ್ಯತೆಯ ಮೇಲೆ ಖಾತೆ ತೆರೆದುಕೊಡಬೇಕು. ಸಹಕಾರ ಬ್ಯಾಂಕುಗಳು, ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳಿಗೂ ಈ ಕುರಿತು ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಚುನಾವಣೆಗೆ ಸಂಬಂಧಿಸಿದ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಹಾಗೂ ಬ್ಯಾಂಕರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News