×
Ad

ತುಮಕೂರು: ವಿಧಾನಸಭಾ ಕ್ಷೇತ್ರಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲು ಜಿಲ್ಲಾಧಿಕಾರಿ ಸೂಚನೆ

Update: 2018-03-29 23:15 IST

ತುಮಕೂರು,ಮಾ.29: ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ, ಹಣ,ಮತ್ತಿತರ ಸಾಗಾಣಿಕೆಯನ್ನು ತಡೆಯಬೇಕಾಗಿರುವುದರಿಂದ ಆದಷ್ಟು ಬೇಗ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ತಪಾಸಣಾ ಕೇಂದ್ರ (ಚೆಕ್‍ಪೋಸ್ಟ್) ಗಳನ್ನು ಸ್ಥಾಪಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಕೆ.ಪಿ.ಮೋಹನ್‍ರಾಜ್ ಸೂಚಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಚುನಾವಣಾಧಿಕಾರಿಗಳು,ಸಹಾಯಕ ಚುನಾವಣಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ಕೆಲ ವಿಧಾನಸಭಾ ಕ್ಷೇತ್ರಗಳು ಅಂತರಾಜ್ಯ ಗಡಿಗಳೊಂದಿಗೆ ಹೊಂದಿಕೊಂಡಿದ್ದು, ಅಕ್ರಮವಾಗಿ ಮದ್ಯ, ಹಣ ಮತ್ತಿತರ ವಸ್ತುಗಳನ್ನು ಸಾಗಿಸುವ ಸಾಧ್ಯತೆ ಇರುವುದರಿಂದ ಸಾಮಾನ್ಯ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಮೂರು ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಬೇಕು. ಖರ್ಚು ವಿಧಾನಸಭಾ ಕ್ಷೇತ್ರಗಳಾದ ಶಿರಾ ಹಾಗೂ ತುಮಕೂರು ಗ್ರಾಮಾಂತರದಲ್ಲಿ ಆಯೋಗದ ನಿರ್ದೇಶನದಂತೆ ಗರಿಷ್ಠ ತಣಾಸಣಾ ಕೇಂದ್ರಗಳನ್ನು ಸ್ಥಾಪಿಸುವಂತೆ ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಸೂಚಿಸಿದರು.

ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಿರುವ ಸ್ಥಳಗಳ ಬಗ್ಗೆ ಸಂಬಂಧಿಸಿದ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಚೆಕ್‍ಪೋಸ್ಟ್ ಗಳಿಗೆ ಅಗತ್ಯವಿರುವ ಮೂಲ ಭೂತ ಸೌಕರ್ಯ ಕಲ್ಪಿಸಬೇಕು. ಚೆಕ್‍ಪೋಸ್ಟ್ ಗಳಲ್ಲಿ  ಪೊಲೀಸ್ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ ಮತ್ತಿತರ ಇಲಾಖೆ ಸಿಬ್ಬಂದಿಗಳು ಸರದಿ ಮೇಲೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಇವರೊಂದಿಗೆ ವಿಡಿಯೋಗ್ರಾಫರ್ ಅವರನ್ನು ನಿಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮಾತನಾಡಿ, ಪೊಲೀಸ್ ಇಲಾಖೆ ವತಿಯಿಂದ ಅಗತ್ಯವಿರುವ ಕಡೆ ಪೊಲೀಸ್ ಸಿಬ್ಬಂದಿಯನ್ನು ಒದಗಿಸಲಾಗುವುದು. ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಕರ್ತವ್ಯದಲ್ಲಿರುವ ಇತರೆ ಇಲಾಖೆಗಳು ಸಮನ್ವಯ ದಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಅನೀಸ್ ಕಣ್ಮಣಿ ಜಾಯ್, ಉಪವಿಭಾಗಾಧಿಕಾರಿ ಹಾಗೂ ಪ್ರಭಾರ ಅಪರ ಜಿಲ್ಲಾಧಿಕಾರಿ ಡಾ. ವೆಂಕಟೇಶಯ್ಯ ಸೇರಿದಂತೆ ಪೊಲೀಸ್ ಹಾಗೂ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News