ತುಮಕೂರು: ಮತಯಂತ್ರದ ಬಗ್ಗೆ ಅಪಪ್ರಚಾರಕ್ಕೆ ಜನರು ಕಿವಿಗೊಡದಂತೆ ಜಿ.ಪಂ.ಸಿಇಓ ಮನವಿ
ತುಮಕೂರು,ಮಾ.29: ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯುದ್ಮಾನ ಮತಯಂತ್ರ(EVM)ಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು, ಜನರು ಇಂತಹ ಗಾಳಿಸುದ್ದಿಗಳಿಗೆ ಕಿವಿಗೊಡಬಾರದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕೆ ಜಾಯ್ ಮನವಿ ಮಾಡಿದ್ದಾರೆ.
ಚುನಾವಣಾ ಕಾರ್ಯಕ್ಕಾಗಿ ನಿಯೋಜಿತ ಅಧಿಕಾರಿ,ಸಿಬ್ಬಂದಿಗಳಿಗಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಇವಿಎಂ ಹಾಗೂ ವಿವಿಪ್ಯಾಟ್ ಕುರಿತು ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮತದಾನ ಪ್ರಕ್ರಿಯೆಯಲ್ಲಿ ಬಳಸಲಾಗುವ ಇವಿಎಂ ಮತಯಂತ್ರವು ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್(ಮತ ಖಾತ್ರಿ ಯಂತ್ರ) ಹಾಗೂ ವಿಎಸ್‍ಡಿಯು(ವಿವಿಪ್ಯಾಟ್ ಸ್ಟೇಟಸ್ ಡಿಸ್‍ಪ್ಲೇ ಯೂನಿಟ್)ಸೇರಿ ನಾಲ್ಕು ಯೂನಿಟ್‍ಗಳನ್ನು ಒಳಗೊಂಡಿದ್ದು, ಮತದಾರನು ಬ್ಯಾಲೆಟ್ ಯೂನಿಟ್‍ನಲ್ಲಿ ಮತ ಚಲಾಯಿಸಿದ ನಂತರ ವಿವಿಪ್ಯಾಟ್ ಯಂತ್ರದಲ್ಲಿರುವ ಡಿಜಿಟಲ್ ಪರದೆಯ ಮೇಲೆ ಮತದಾರ ಮತ ಚಲಾಯಿಸಿದ ಅಭ್ಯರ್ಥಿಯ ವಿವರ ಮೂಡಿಬರಲಿದೆ. ವಿವಿಪ್ಯಾಟ್ ಯಂತ್ರವನ್ನು ಪ್ರಥಮ ಬಾರಿಗೆ ರಾಜ್ಯದ ಚುನಾವಣೆಯಲ್ಲಿ ಬಳಸಲಾಗುತ್ತಿದ್ದು, ಮತದಾರರಿಗೆ ಈ ಯಂತ್ರದ ಬಗ್ಗೆ ಅರಿವು ಮೂಡಿಸಬೇಕು ಎಂದರಲ್ಲದೆ ಮತ ಖಾತ್ರಿ ಯಂತ್ರದ ಪರದೆಯ ಮೇಲೆ ಕ್ರಮ ಸಂಖ್ಯೆ, ಅಭ್ಯರ್ಥಿಯ ಹೆಸರು, ಚಿಹ್ನೆ ಮೂಡಲಿದ್ದು, ಇದರಿಂದ ಮತದಾರ ತಾನು ಯಾವ ಅಭ್ಯರ್ಥಿ,ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದೇನೆ ಎನ್ನುವ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ವಿದ್ಯುದ್ಮಾನ ಮತಯಂತ್ರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಯುತ್ತಿರುವುದರಿಂದ ಜನರಿಗೆ ಮತಯಂತ್ರಗಳ ಕಾರ್ಯಕ್ಷಮತೆ ಬಗ್ಗೆ ನಂಬಿಕೆ ಬರುವಂತೆ ಜಾಗೃತಿ ಮೂಡಿಸಬೇಕಿದೆ. ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಮತದಾರಿಗೆ ಮತಯಂತ್ರ ಹಾಗೂ ಮತ ಖಾತ್ರಿ ಯಂತ್ರದ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡುವ ಮೂಲಕ ಅರಿವು ಮೂಡಿಸಬೇಕು. ಚುನಾವಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಗಳು ವಿವಿ ಪ್ಯಾಟ್ ಯಂತ್ರ ಅಳವಡಿಕೆ ಹಾಗೂ ಬಳಕೆಯ ವಿಧಾನದ ಬಗ್ಗೆ ತರಬೇತಿಯಲ್ಲಿ ಸೂಕ್ತವಾಗಿ ತಿಳಿದುಕೊಳ್ಳುವಂತೆ ಸೂಚನೆ ನೀಡಿದರು.
ಪುಸ್ತಕ ಬಿಡುಗಡೆ: ಈ ಸಂದರ್ಭದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಸ್ವೀಪ್ ಚಟುವಟಿಕೆ ಕುರಿತ ಕ್ರಿಯಾ ಯೋಜನೆಯ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಮತಯಂತ್ರ ಹಾಗೂ ಮತಖಾತ್ರಿ ಯಂತ್ರದ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.
ಜಿಲ್ಲಾ ಪಂಚಾಯತ್ ಯೋಜನಾ ಶಾಖೆಯ ಉಪನಿರ್ದೇಶಕಿ ಹಾಗೂ ವಿವಿಪ್ಯಾಟ್ ಯಂತ್ರದ ನೋಡಲ್ ಅಧಿಕಾರಿ ಗಾಯಿತ್ರಿ, ಭೂಸೇನಾ ನಿಗಮದ ಉಪನಿರ್ದೇಶಕ ರಾಜಶೇಖರ್, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ರಾಜಕುಮಾರ್, ಬಿಇಎಲ್ ಸಂಸ್ಥೆಯ ಎಂಜನಿಯರ್ ಗಳು, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು & ಸಹಾಯಕ ಚುನಾವಣಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಎಲ್ಲಾ ನಗರಸಭೆ ಮತ್ತು ಪಟ್ಟಣ ಪಂಚಾಯತ್, ಪುರಸಭೆಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮ ಪಂಚಾಯತಯ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು,ತಾಲೂಕು ಎಂ.ಐ.ಎಸ್. ಸಂಯೋಜಕರುಗಳು ತರಬೇತಿಯಲ್ಲಿ ಭಾಗವಹಿಸಿದ್ದರು.