ಆಟದ ಮೈದಾನ ಕಬಳಿಸಲು ಜಗದೀಶ್ ಶೆಟ್ಟರ್ ಕುಮ್ಮಕ್ಕು: ಸಿಬಿಎಲ್ ಹೆಗಡೆ ಆರೋಪ
ಹುಬ್ಬಳ್ಳಿ, ಮಾ.30: ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಸಾರ್ವಜನಿಕ ಆಟದ ಮೈದಾನದಲ್ಲಿ ಕರ್ನಾಟಕ ಜಿಮ್‌ಖಾನ ಅಸೋಸಿಯೇಷನ್ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿ ಮೈದಾನವನ್ನು ಕಬಳಿಸುವ ಹುನ್ನಾರ ನಡೆಸುತ್ತಿದೆ. ಇದಕ್ಕೆ ಜಗದೀಶ್ ಶೆಟ್ಟರ್ ಕುಮ್ಮಕ್ಕಿದೆ ಎಂದು ಗ್ರೌಂಡ್ ಬಚಾವೊ ಸಮಿತಿಯ ಅಧ್ಯಕ್ಷ ಸಿ.ಬಿ.ಎಲ್.ಹೆಗಡೆ ಆರೋಪಿಸಿದ್ದಾರೆ.
ಶುಕ್ರವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಆಟದ ಮೈದಾನ ಕಬಳಿಕೆಯಲ್ಲಿ ಕರ್ನಾಟಕ ಜಿಮ್‌ಖಾನ್ ಅಸೋಸಿಯೇಷನ್ ಅವರೊಂದಿಗೆ ಅಧಿಕಾರಿ ವರ್ಗದವರು ಶಾಮೀಲಾಗಿ ಸರಕಾರಿ ಆಸ್ತಿಯನ್ನು ಖಾಸಗಿ ಆಸ್ತಿಯನ್ನಾಗಿ ಮಾರ್ಪಡಿಸಲು ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
2008ರಿಂದ 2013ರ ವರಗೆ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಹಾಗೂ ಮಹಾನಗರ ಪಾಲಿಕೆಯೂ ಇವರದೇ ಆಡಳಿತವಿದ್ದಾಗ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಆಸ್ತಿಯನ್ನಾಗಿಸಲು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರೊಂದಿಗೆ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಪಾಲಿಕೆಯ ಬಿಜೆಪಿ ಸದಸ್ಯ ವೀರಣ್ಣ ಸವಡಿ ಕೂಡ ಕೈಜೋಡಿಸಿ ಸಾರ್ವಜನಿಕರಿಗೆ ಮೋಸ ವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ದಾಖಲೆಯಲ್ಲಿ ಇಂದಿಗೂ ಕೂಡ ಆಟದ ಮೈದಾನ ಬಯಲು ಜಾಗ ಎಂದು ದಾಖಲಾಗಿದೆ. ಆದರೆ ಕರ್ನಾಟಕ ಜಿಮ್‌ಖಾನದವರು ನಗರಾಭಿವೃದ್ಧಿ ಪ್ರಾಧಿಕಾರದ ಯಾವುದೇ ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಿಸಿರುವುದು ಅಕ್ಷಮ್ಯ ಅಪರಾಧ ಎಂದು ಆರೋಪಿಸಿದರು.