ದಲಿತರ ಭಾವನೆಗಳಿಗೆ ಧಕ್ಕೆ ತಂದರೆ ಸಹಿಸುವುದಿಲ್ಲ: ಸಂವಾದದಲ್ಲಿ ಅಮಿತ್ ಶಾಗೆ ನೇರವಾಗಿ ಎಚ್ಚರಿಸಿದ ಶ್ರೀನಿವಾಸ ಪ್ರಸಾದ್
ಮೈಸೂರು,ಮಾ.30: ದಲಿತರ ಭಾವನೆಗಳಿಗೆ ಧಕ್ಕೆ ತಂದರೆ ಸಹಿಸುವುದಿಲ್ಲ. ಅಂಬೇಡ್ಕರ್ ಮತ್ತು ಸಂವಿಧಾನ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ದಲಿತ ಮುಖಂಡ ವಿ.ಶ್ರೀನಿವಾಸಪ್ರಸಾದ್ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ನೇರವಾಗಿ ಹೇಳಿ ಎಚ್ಚರಿಸಿದ್ದಾರೆ.
ನಗರದ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ದಲಿತರೊಂದಿಗಿನ ಸಂವಾದದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. 'ಬಿಜೆಪಿ ದಲಿತರ ವಿರೋದಿ ಎಂಬ ನಿಲುವು ಕೆಲವರಲ್ಲಿದೆ. ಅದನ್ನು ಹೋಗಲಾಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ಈ ದೇಶದ ಶ್ರೇಷ್ಠ ಗ್ರಂಥ ಸಂವಿಧಾನ ಎಂದು ಹೇಳಿದ್ದಾರೆ. ಅಂತಹದರಲ್ಲಿ ಕೆಳಸ್ಥರದ ಕೆಲವರು ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ದಲಿತರಿಗೆ ನೋವು ತಂದಿದೆ' ಎಂದರು.
ಅಂಬೇಡ್ಕರ್ ಹಾಗೂ ದಲಿತರ ನಡುವೆ ಭಾವನಾತ್ಮಕ ಸಂಬಂಧವಿದೆ. ಅವರ ನಡುವೆ ತಾಯಿ ಮಕ್ಕಳ ಸಂಬಂಧ ಇದೆ. ಹಾಗಾಗಿ ಸಂವಿಧಾನ, ಅಂಬೇಡ್ಕರ್ ಬಗ್ಗೆ ಯಾರೇ ಮಾತನಾಡಿದರು ನಮಗೆ ನೋವಾಗುತ್ತದೆ. ಅಂತಹ ಹೇಳಿಕೆಗಳನ್ನು ದಲಿತರು ಸಹಿಸುವುದಿಲ್ಲ. ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನೀವು ಇಂತಹ ಹೇಳಿಕೆಗಳ ಬಗ್ಗೆ ಮಾತನಾಡಬೇಕು. ಜೊತೆಗೆ ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ನೇರವಾಗಿ ಅಮಿತ್ ಶಾ ಅವರಿಗೆ ಹೇಳಿದರು.
ಬಿಜೆಪಿಯವರು ಸಂವಾದ ಏರ್ಪಡಿಸಿದ್ದೇವೆ ಎಂದು ನಮ್ಮನ್ನು ಆಹ್ವಾನಿಸಿದ್ದರು. ಅದರಂತೆ ನಾವು ಕಾರ್ಯಕ್ರಮಕ್ಕೆ ಬಂದಿದ್ದೇವೆ. ಆದರೆ ಇಲ್ಲಿ ಪ್ರಶ್ನೆಗಳನ್ನು ಲಕೋಟೆಯಲ್ಲಿ ಹಾಕಿ ಎಂದರು. ಹಾಗಿದ್ದ ಮೇಲೆ ಸಂವಾದಕ್ಕೆ ನಮ್ಮನ್ನು ಏಕೆ ಆಹ್ವಾನಿಸಬೇಕಿತ್ತು? ಹೋಗಲಿ ಎಂದು ಕುಳಿತುಕೊಂಡೆವು. ನಮ್ಮೆಲ್ಲರ ಇಂಗಿತವನ್ನು ಅವರದೇ ಪಕ್ಷದ ವಿ.ಶ್ರೀನಿವಾಸ ಪ್ರಸಾದ್ ವ್ಯಕ್ತಪಡಿಸಿದರು. ನಮಗೆ ಸಂತೋಷವಾಯಿತು. ಆದರೆ ಅನಂತಕುಮಾರ್ ಹೆಗಡೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಅಮಿತ್ ಶಾ ಹೇಳುತ್ತಾರೆ. ಹಾಗಿದ್ದ ಮೇಲೆ ಇವರು ಅವರನ್ನು ಏಕೆ ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ? ಇವರದು ಬರೀ ಗಿಮಿಕ್. ಚುನಾವಣೆ ಸಮಯದಲ್ಲಿ ದಲಿತರನ್ನು ಓಲೈಸಿಕೊಳ್ಳಲು ಇಂತಹ ಸಮಾರಂಭವನ್ನು ಬಿಜೆಪಿಯವರು ಏರ್ಪಡಿಸಿ ನಾಟಕವಾಡುತ್ತಿದ್ದಾರೆ.
ಚೋರನಹಳ್ಳಿ ಶಿವಣ್ಣ, ಮೈಸೂರು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ
ದಲಿತರನ್ನು ಮೂರ್ಖರನ್ನಾಗಿ ಮಾಡಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಅಂಬೇಡ್ಕರ್ ದಲಿತರ ಆರಾಧ್ಯ ದೈವ. ಅಂಬೇಡ್ಕರ್ ದಲಿತರಿಗೆ ಮಾತ್ರ ಸಂವಿಧಾನ ಬರೆದಿಲ್ಲ. ಈ ದೇಶದ 120 ಕೋಟಿ ಜನರ ಒಳಿತಿಗಾಗಿ ಬರೆದಿದ್ದಾರೆ. ಇಂತಹ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬ ಹೆಗಡೆ ಹೇಳಿಕೆಯನ್ನು ಅಮಿತ್ ಶಾ ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ.
-ಎಡೆದೊರೆ ಮಹದೇವಯ್ಯ ,ದಲಿತ ಮುಖಂಡ
ಸಂವಾದಕ್ಕೆ ನಮ್ಮನ್ನು ಆಹ್ವಾನಿಸಿ ಅಪಮಾನಿಸಿದ್ದಾರೆ. ಕೇಂದ್ರ ಸಚಿವ ಹೆಗಡೆ ಹೇಳಿಕೆಯನ್ನು ಅಮಿತ್ ಶಾ ಸಮರ್ಥಿಸಿಕೊಳ್ಳುವ ಮೂಲಕ ಇವರೇ ಹೆಗಡೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಇವರು ದಲಿತರ ಪರ ಎನ್ನುವುದಾದರೆ ಅವರನ್ನು ಸಚಿವ ಸಂಪುಟದಿಂದ ಕಿತ್ತುಹಾಕಬಹುದಿತ್ತು. ಅಥವಾ ಪಕ್ಷದಿಂದ ವಜಾ ಮಾಡಬಹುದಿತ್ತು. ಅಮಿತ್ ಶಾ ಸಹ ದಲಿತ ವಿರೋದಿ ಎಂಬುವುದು ಇವರ ಮಾತಿನಿಂದ ಅರ್ಥವಾಗುತ್ತಿದೆ.
-ನಗರ್ಲೆ ವಿಜಯಕುಮಾರ್, ಜನಸಂಗ್ರಾಮ ಪರಿಷತ್ ವಿಭಾಗೀಯ ಸಂಚಾಲಕ