×
Ad

ಕರ್ನಾಟಕದಲ್ಲಿ ಬಿಜೆಪಿಯ ಸುನಾಮಿ ಅಲೆ ಎದ್ದಿದೆ: ಅಮಿತ್ ಶಾ

Update: 2018-03-30 19:53 IST

ಕೊಳ್ಳೇಗಾಲ,ಮಾ.30: ಈ ಬಾರಿ ಕರ್ನಾಟಕದಲ್ಲಿ ಸಿದ್ದರಾಮಯ್ಯರ ದುರಾಡಳಿತ, ಭ್ರಷ್ಟಾಚಾರ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಸುನಾಮಿ ಅಲೆ ಎದ್ದಿದ್ದು, 43 ದಿನಗಳಲ್ಲಿ ಸಿದ್ದರಾಮಯ್ಯರ ಟೆಂಟ್ ಕಿತ್ತೊಗೆಯಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿದರು.

ಪಟ್ಟಣದ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ನವಶಕ್ತಿ ಸಮಾವೇಶ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾನು ಪ್ರವಾಸ ಮಾಡಿದ ಎಲ್ಲಾ ಕಡೆ ಬಿಜೆಪಿಗೆ ಜನರು ಬೆಂಬಲ ಸೂಚಿಸಿರುವುದನ್ನು ಕಾಣುತ್ತಿದ್ದೇನೆ. ಈಗಾಗಲೇ 21 ರಾಜ್ಯಗಳನ್ನು ಕಾಂಗ್ರೆಸ್ ಮುಕ್ತ ರಾಜ್ಯವಾಗಿಸಿದಂತೆ ಈ ಬಾರಿ ಕರ್ನಾಟಕವನ್ನು ಕೂಡಾ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುವುದು ಖಂಡಿತಾ ಎಂದು ಹೇಳಿದರು.

ಕರ್ನಾಟದಲ್ಲಿ 150 ಮಿಷನ್ ಮಾಡುವುದು ಖಚಿತ. ಬಿಜೆಪಿ ಸರ್ಕಾರದ ಮಹತ್ವ ಜನರಿಗೆ ತಿಳಿದಿದೆ ಹಾಗೂ ಜನಪರವಾದ ಸರ್ಕಾರ ಎಂದರೆ ಅದು ನಮ್ಮ ಬಿಜೆಪಿ ಸರ್ಕಾರವೆ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ ಬೂತ್ ಮಟ್ಟದ ಕಾರ್ಯಕರ್ತರ ಮಹತ್ವ ತಿಳಿದಿಲ್ಲ. ಬೂತ್ ಮಟ್ಟದ ಕಾರ್ಯಕರ್ತರ ಶ್ರಮವು ನಮ್ಮ ಗೆಲುವಿಗೆ ಕಾರಣವಾಗಿದೆ. ಬೂತ್ ಮಟ್ಟದ ಕಾರ್ಯಕರ್ತನಾಗಿ ಬೆಳೆದ ನಾನು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು. 

ನಂತರ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಅಭ್ಯರ್ಥಿ ಯಾರೇ ಬರಲಿ, ನೀವು ಮೋದಿಯವರ ಕೈ ಬಲಪಡಿಸಿ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಲು ಬಿಜೆಪಿಯನ್ನು ಗೆಲ್ಲಿಸಬೇಕು. ಕರ್ನಾಟಕದಲ್ಲಿ ಭ್ರಷ್ಟ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲು ತಾವೆಲ್ಲರೂ ತನು ಮನ ಧನ ಗಳಿಂದ ಸಕ್ರಿಯವಾಗಿ ಕೆಲಸಮಾಡಿ. ಬಿಜೆಪಿ ಸರ್ಕಾರ ಬರಲು ರಾಜ್ಯದಲ್ಲಿ 150 ಸ್ಥಾನ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. 

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವ ಸಿ.ಟಿ.ರವಿ, ವಿ.ಸೋಮಣ್ಣ, ಮಾಜಿ ಶಾಸಕ ಜಿ.ಎನ್,ನಂಜುಂಡಸ್ವಾಮಿ, ಪರಿಮಳನಾಗಪ್ಪ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಪ್ಪ, ಮುಖಂಡರುಗಳಾದ ರಮೇಶ್ ಮುರಾರಿ, ಜಿಪಂ ಸದಸ್ಯೆ ಜಯಂತಿ ಸೇರಿದಂತೆ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News