ಸಿದ್ದರಾಮಯ್ಯರ ರಾಜಕೀಯ ಅಂತ್ಯ ಸನ್ನಿಹಿತವಾಗಿದೆ: ಎಚ್.ಡಿ.ದೇವೇಗೌಡ
ನಾಗಮಂಗಲ, ಮಾ.30: ತನ್ನ ಮಾತೃ ಪಕ್ಷ ಜೆಡಿಎಸ್ ಅನ್ನು ಮುಗಿಸಲು ಹೊರಟಿರುವ ಸಿದ್ದರಾಮಯ್ಯ ಅವರ ರಾಜಕೀಯ ಅಂತ್ಯ ಸನ್ನಿಹಿತವಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಕುಮಾರಪರ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ಅಪ್ಪಮಕ್ಕಳ ಪಕ್ಷ ಅಲ್ಲ. ಬಡವರ, ದಲಿತರ, ಕಾರ್ಮಿಕರಿಗಾಗಿ ಹುಟ್ಟಿರುವ ಪಕ್ಷವೆಂದರು. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಬೆಳೆಸಿದ್ದು ಜೆಡಿಎಸ್. ಅವರನ್ನು ಮುಖ್ಯಮಂತ್ರಿ ಮಾಡಿಸಲು ಸೋನಿಯಾ ಗಾಂಧಿಗೆ ಕೈಮುಗಿದದ್ದು ನಾನು. ಇದನ್ನು ಮರೆತರೆ ಸಿದ್ದರಾಮಯ್ಯ ರಾಜಕೀಯ ಅಂತ್ಯ ಕಾಣುತ್ತಾರೆ ಎಂದು ಅವರು ಎಚ್ಚರಿಸಿದರು.
ಡಿ.ಕೆ.ಶಿವಕುಮಾರ್ ಬರೆದುಕೊಟ್ಟಂತೆ ಓದಿದ ರಾಹುಲ್ ಗಾಂಧಿ ಜೆಡಿಎಸ್ ಸಂಘಪರಿವಾದ ಟೀಂ ಎಂದು ಕಠಿಣವಾಗಿ ಟೀಕಿಸಿದ್ದಾರೆ. ಜೆಡಿಎಸ್ ಬಗ್ಗೆ ಮಾತನಾಡಲು ರಾಹುಲ್ ಯಾರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಪುಟ್ಟರಾಜು ಅವರನ್ನು ತುಳಿಯಲು ಚಲುವರಾಯಸ್ವಾಮಿ ಸಾಕಷ್ಟು ಬಾರಿ ಪ್ರಯತ್ನಿಸಿದರು. ಎಸ್.ಡಿ.ಜಯರಾಂ ಪುತ್ರ ಅಶೋಕ್ ಜಯರಾಂಗೆ ಟಿಕೆಟ್ ತಪ್ಪಿಸಿದರು ಎಂದು ಅವರು ಆರೋಪಿಸಿದರು. ಜೆಡಿಎಸ್ ಅಭ್ಯರ್ಥಿ ಕೆ.ಸುರೇಶ್‍ಗೌಡರನ್ನು ಗೆಲ್ಲಿಸುವ ಮೂಲಕ ಒಬ್ಬ ಸಾಮಾನ್ಯ ಗುತ್ತಿಗೆದಾರನಾಗಿದ್ದವನಿಗೆ ಎಲ್ಲವನ್ನೂ ನೀಡಿ ಬೆಳೆಸಿದ ಪಕ್ಷಕ್ಕೆ ದ್ರೋಹ ಮಾಡಿದವರಿಗೆ ತಕ್ಕ ಉತ್ತರ ನೀಡಬೇಕು ಎಂದು ಅವರು ಕರೆ ನೀಡಿದರು.
ತಮಿಳುನಾಡು ಸರಕಾರ ನೀರಿನ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದಿದೆ. ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯ ನೋಡಿ ನಿದ್ರೆ ಬರುತ್ತಿಲ್ಲ. ಇರುವಷ್ಟು ದಿನ ರಾಜ್ಯದ ಜನರಿಗಾಗಿ ಹೋರಾಡುತ್ತೇನೆ ಎಂದು ಅವರು ಹೇಳಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಸಾಲದಿಂದ ಮುಕ್ತಿ: ಎಚ್.ಡಿ.ಕುಮಾರಸ್ವಾಮಿ
ತನ್ನ ಸರಕಾರ ಅಸ್ತಿತ್ವಕ್ಕೆ ಬಂದರೆ ರೈತರ ಎಲ್ಲಾ ಸಾಲಮನ್ನಾ ಜತೆಗೆ ಸಾಲದಿಂದ ಮುಕ್ತಿಗೊಳಿಸಲು ಹೊಸ ಕೃಷಿ ನೀತಿ ಜಾರಿ ಮಾಡುತ್ತೇನೆ. ಕಾವೇರಿ ನೀರು ಉಳಿಸಲು, ಮಹಾದಾಯಿ ನೀರು ಹರಿಸಲು, ರೈತರ ಸರಕಾರಕ್ಕಾಗಿ, ರಾಜ್ಯದ ಉಳಿವಿಗಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು. ರೈತರ ಸಾಲಮನ್ನಾದ 8,160 ಕೋಟಿ ರೂ.ಗಳಲ್ಲಿ ಕೇವಲ 1,300 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಉಳಿದ ಹಣವನ್ನು ಜೂನ್‍ನಲ್ಲಿ ಕೊಡುತ್ತಾರಂತೆ. ಅವರ ಪಕ್ಷ ಅಧಿಕಾರಕ್ಕೆ ಬಂದರ ತಾನೆ ಕೊಡುವುದು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಜೆಡಿಎಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಈ ಬಾರಿ ಕಾಂಗ್ರೆಸ್ ಸರಕಾರ ಕಿತ್ತೊಗೆಯಲು ಜನರು ತೀರ್ಮಾನಿಸಿದ್ದಾರೆ. ಅದಕ್ಕೆ ಈ ಸಮಾವೇಶದಲ್ಲಿ ಸೇರಿರುವ ಜನಸಾಗರವೇ ಸಾಕ್ಷಿ. ಸುರೇಶ್‍ಗೌಡ ಹಣವಿಲ್ಲದೆ ಪರದಾಡುತ್ತಿದ್ದರೆ, 50 ಕೋಟಿ ಆದರೂ ಖರ್ಚು ಮಾಡಿ ಗೆದ್ದು ಬರ್ತೀನಿ ಅಂತ ಚಲುವರಾಯಸ್ವಾಮಿ ಬೀಗುತ್ತಿದ್ದಾರೆ. ಆಸೆ, ಆಮಿಷಕ್ಕೆ ಒಳಗಾಗದೆ ಸುರೇಶ್‍ಗೌಡರನ್ನು ಗೆಲ್ಲಿಸಿ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಕೆ.ಸುರೇಶ್‍ಗೌಡ ಮಾತನಾಡಿ, ನಾನು ಐಶ್ವರ್ಯ, ಅಂತಸ್ತು ಕಳೆದುಕೊಂಡಿರಬಹುದು. ಆದರೆ, ಜನರ ಪ್ರೀತಿ, ವಿಶ್ವಾಸ ಕಳೆದುಕೊಂಡಿಲ್ಲ. ಈ ಬಾರಿ ಗೆಲ್ಲಿಸುವ ಮೂಲಕ ದರ್ಪದಿಂದ ಮೆರೆಯುತ್ತಿರುವವರಿಗೆ ಬುದ್ದಿ ಕಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಶಾಸಕರಾದ ಡಿ.ಸಿ.ತಮ್ಮಣ್ಣ, ಶರವಣ, ಕೆ.ಸಿ.ನಾರಾಯಣಗೌಡ, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಎಲ್.ಆರ್.ಶಿವರಾಮೇಗೌಡ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅದ್ಯಕ್ಷೆ ಲಕ್ಷ್ಮಿಅಶ್ವಿನ್‍ಗೌಡ, ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಸದಸ್ಯ ಶಿವಪ್ರಕಾಶ್, ಮುತ್ತಣ್ಣ, ತೂಬಿನಕೆರೆ ಜವರೇಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.