ಅಧಿಕ ಮಳೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆಯಾಗದ ಅಂತರ್ಜಲ

Update: 2018-03-30 16:12 GMT

ಬೆಂಗಳೂರು, ಮಾ.30: ಕಳೆದ ವರ್ಷ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಅಂತರ್ಜಲ ಮಾತ್ರ ಏರಿಕೆಯಾಗಿಲ್ಲ. ದಶಕದ ಸರಾಸರಿಗೆ ಹೊಲಿಸಿದರೆ 2018ರ ಜನವರಿಯಲ್ಲಿ ಶೇ.53 ಅಂತರ್ಜಲ ವೀಕ್ಷಣಾ ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ.

ಕೇಂದ್ರ ಅಂತರ್ಜಲ ಮಂಡಳಿ ಜನವರಿ ಅಂತ್ಯದ ಅಂತರ್ಜಲ ಮಟ್ಟದ ಅಂಕಿ ಅಂಶಗಳನ್ನಿರಿಸಿ ತಯಾರಿಸಿರುವ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 1,432 ಅಂತರ್ಜಲ ವೀಕ್ಷಣಾ ಬಾವಿಗಳ ಪೈಕಿ 1,390 ವೀಕ್ಷಣಾ ಬಾವಿಗಳ ನೀರಿನ ಮಟ್ಟ ಪರಿಶೀಲಿಸಲಾಗಿದ್ದು, ಕಳೆದ 10 ವರ್ಷಗಳ ಸರಾಸರಿಯಡಿ 731 (ಶೇ.53) ಬಾವಿಗಳಲ್ಲಿ ನೀರಿನ ಮಟ್ಟ ಕುಸಿದಿದೆ. 659 ಬಾವಿಗಳಲ್ಲಿ(ಶೇ.47) ಮಾತ್ರ ನೀರಿನ ಮಟ್ಟ ಏರಿಕೆಯಾಗಿದೆ.

731 ಬಾವಿಗಳ ಪೈಕಿ 541 ಬಾವಿಗಳಲ್ಲಿ ನೀರಿನ ಮಟ್ಟ 0-2 ಮಿಟರ್‌ಗೆ ಇಳಿಕೆಯಾಗಿದ್ದು, 115 ಬಾವಿಗಳಲ್ಲಿ 2-4 ಮಿ., 75 ಬಾವಿಗಳಲ್ಲಿ 4 ಮಿ.ಗಿಂತಲೂ ಅಧಿಕ ನೀರಿನ ಮಟ್ಟ ಇಳಿಕೆಯಾಗಿದೆ. ಇವುಗಳಲ್ಲಿ ಬಹುತೇಕ ಬಾವಿಗಳು ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಕೊಪ್ಪಳ, ಬಳ್ಳಾರಿ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಉತ್ತರ ಕನ್ನಡ, ತುಮಕೂರು, ಚಾಮರಾಜನಗರ ಜಿಲ್ಲೆಗಳಲ್ಲಿವೆ.

ಕೇಂದ್ರ ಅಂತರ್ಜಲ ಮಂಡಳಿ 3-4 ತಿಂಗಳಿಗೊಮ್ಮೆ ಈ ವೀಕ್ಷಣಾ ಬಾವಿಗಳ ಪರಿಶೀಲನೆ ನಡೆಸಿ ಅಂತರ್ಜಲ ಮಟ್ಟ ವರದಿ ತಯಾರಿಸುತ್ತದೆ. ಮೇ 2017 ರಿಂದ ಜನವರಿ 2018ರ ಅವಧಿಯ ಅಂತರ್ಜಲ ಮಟ್ಟ ವರದಿಯಲ್ಲಿ ಉತ್ತರ ಕರ್ನಾಟಕ, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯ 1,096 ವೀಕ್ಷಣಾ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು ಕಂಡು ಬಂದಿದೆ. ಇವುಗಳ ಪೈಕಿ 518 ಬಾವಿಗಳಲ್ಲಿ 2 ಮಿ. ವರೆಗೆ, 316 ಬಾವಿಗಳಲ್ಲಿ 2-4 ಮಿ. ಮತ್ತು 262 ಬಾವಿಗಳಲ್ಲಿ 4 ಮಿ.ಗೂ ಅಧಿಕ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಸತತ ಬರಗಾಲದಿಂದ ತತ್ತರಿಸಿ ಹೊಗಿದ್ದ ರಾಜ್ಯ 2017ರಲ್ಲಿ ಉತ್ತಮ ಮಳೆ ಪಡೆದಿರುವುದಕ್ಕೆ ಇದು ಸಾಕ್ಷಿಯಾಗಿದೆ. ಸಿಂಧಗಿ, ಬೀಳಗಿ, ನವಲಗುಂದ, ಗುಂಡ್ಲುಪೇಟೆ, ಗೌರಿಬಿದನೂರು ತಾಲೂಕಿನಲ್ಲಿ ಮಾತ್ರ ಈ ಅವಧಿಯಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡುಬಂದಿದೆ.

ಮುಂಗಾರು ಮತ್ತು ಹಿಂಗಾರಿನಲ್ಲಿ ದಾಖಲಾದ ಉತ್ತಮ ಮಳೆಯಿಂದಾಗಿ ಮೇ 2017ಕ್ಕೆ ಹೊಲಿಸಿದರೆ ರಾಜ್ಯದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಆದರೆ ದಶಕದ ಸರಾಸರಿಗೆ ಹೋಲಿಸಿದರೆ ಅರ್ಧಕ್ಕಿಂತ ಅಧಿಕ ವೀಕ್ಷಣಾ ಬಾವಿಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News