×
Ad

ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ನಾಗರಿಕನ ಮೇಲಿದೆ: ಡಾ.ಪ್ರಕಾಶ್ ಅಂಬೇಡ್ಕರ್

Update: 2018-03-30 21:59 IST

ತುಮಕೂರು, ಮಾ.30:  ಭಾರತದ ಸಂವಿಧಾನದ ಪ್ರಕಾರ ಯಾವುದೇ ಸರಕಾರ ಧರ್ಮದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಆದರೂ ಭಾರತದಲ್ಲಿ ಏಕ ಸಂಸ್ಕೃತಿ ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಹಲವು ನಿಯಂತ್ರಣಗಳನ್ನು ಹೇರುತ್ತಿದ್ದು, ಇದರ ವಿರುದ್ದ ಹೋರಾಡುವ ಮೂಲಕ ಸಂವಿಧಾನವನ್ನು ರಕ್ಷಿಸುವ ಗುರುತರ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಡಾ.ಪ್ರಕಾಶ್ ಅಂಬೇಡ್ಕರ್ ತಿಳಿಸಿದ್ದಾರೆ.

ನಗರದ ಟೌನ್‍ಹಾಲ್‍ನಲ್ಲಿ ಜನಾಂದೋಲನ ಮಹಾಮೈತ್ರಿ, ಸಂವಿಧಾನ ಉಳಿವಿಗಾಗಿ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಸಂವಿಧಾನ ಉಳಿಸಿ, ದೇಶ ಉಳಿಸಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಬಿಜೆಪಿ ಮತ್ತು ಆರ್.ಎಸ್.ಎಸ್ ಅಂಜೆಂಡಾ ಆಗಿರುವ ಏಕ ಧರ್ಮ ಮತ್ತು ಸಂಸ್ಕೃತಿಯನ್ನು ಜಾರಿಗೆ ತರಲು ಹಾಲಿ ಇರುವ ಸಂವಿಧಾನದಿಂದ ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಬಿಜೆಪಿ ನಾಯಕರು, ಸಂವಿಧಾನವನ್ನು ಪರಾಮರ್ಶಿಸುವ ಮಾತುಗಳನ್ನಾಡುತ್ತಿದ್ದು, ಇದರ ವಿರುದ್ದ ನಾವೆಲ್ಲರೂ ಒಗ್ಗೂಡುವ ಅಗತ್ಯವಿದೆ ಎಂದರು.

ಭಾರತೀಯರೆಲ್ಲರೂ ಗೌರವಿಸುವಂತಹ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನಾಡುತ್ತಿರುವ ಬಿಜೆಪಿ ನಾಯಕರಿಗೆ ನಮ್ಮ ಪ್ರಶ್ನೆ ಇಷ್ಟೆ. ಕಳೆದ 70 ವರ್ಷಗಳಿಂದ ಈ ದೇಶದ ಬಡವ, ಬಲ್ಲಿದ, ಉಚ್ಚ, ನೀಚ ಎಂಬ ಭೇಧ ಭಾವವಿಲ್ಲದೆ ಎಲ್ಲಾ ಜನರಿಗೂ ಒಂದೇ ರೀತಿಯ ಕಾನೂನು, ಹಕ್ಕು ನೀಡುತ್ತಿರುವುದು ನಿಮಗೆ ಇಷ್ಟವಿಲ್ಲವೇ? ಚುನಾವಣೆ ಎಂಬ ಆಸ್ತ್ರದ ಮೂಲಕ ಒಂದು ಮತಕ್ಕೆ ಒಂದೇ ಮೌಲ್ಯ ರೂಪಿಸಿರುವುದು ನಿಮಗೆ ಸರಿ ಕಾಣುತ್ತಿಲ್ಲವೇ? ಅಲ್ಲಿನ ಭೌಗೋಳಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅವರು ಇಷ್ಟಪಟ್ಟ ಧರ್ಮವನ್ನು ಪರಿಪಾಲಿಸಿಕೊಂಡು ಹೋಗಲು ಅನುವು ಮಾಡಿಕೊಟ್ಟಿರುವುದು ನಿಮಗೆ ಸಹಿಸಲು ಸಾಧ್ಯವಾಗುತ್ತಿಲ್ಲವೇ? ಎಂದು ಪ್ರಶ್ನಿಸಿದ ಡಾ.ಪ್ರಕಾಶ್ ಅಂಬೇಡ್ಕರ್, ಭಾರತ ಕಳೆದ 70 ವರ್ಷಗಳಿಂದ ಸಾಧಿಸಿರುವ ಉನ್ನತ್ತೀಕರಣಕ್ಕೆ ಭಾರತದ ಸಂವಿಧಾನ ಕಾರಣವಲ್ಲವೇ ಎಂಬುದನ್ನು ಜನತೆ ಮುಂದಿಡಿ ಎಂದು ಒತ್ತಾಯಿಸಿದರು.

ಆರ್.ಎಸ್.ಎಸ್ ಮತ್ತು ಬಿಜೆಪಿ ನಾಯಕರಿಗೆ ಬೇಕಿರುವುದು ಸಾಂಸ್ಕೃತಿಕ ಮತ್ತು ಬೌಗೋಳಿಕ ರಾಷ್ಟ್ರವೇ ಹೊರತು, ಸೌಹಾರ್ಧ,ಬೌದ್ದಿಕ ಭಾರತ ಅಲ್ಲ. ಭಾರತ ವಿವಿಧ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ರಾಷ್ಟ್ರ. ಉತ್ತರದ ಸಾಂಸ್ಕೃತಿಕ ನಡವಳಿಕೆಗೂ, ದಕ್ಷಿಣದ ಸಾಂಸ್ಕೃತಿಕ ನಡವಳಿಕೆಗೂ ವ್ಯತ್ಯಾಸವಿದೆ. ಭೌಗೋಳಿಕವಾಗಿಯೂ ಹಲವಾರು ವೈರುದ್ಯ, ರಾಜ್ಯ ರಾಜ್ಯಗಳ ನಡುವೆ ನದಿ ನೀರು, ಪ್ರಾಕೃತಿಕ ಸಂಪತ್ತಿನ ಹಂಚಿಕೆಯಲ್ಲಿ ಸಾಕಷ್ಟು ವಿವಾದಗಳಿವೆ. ಇವುಗಳನ್ನು ವೀರಿದ ಭಾರತ ಕಟ್ಟಬೇಕು. ಆಗ ಮಾತ್ರ ಭಾರತವೆಂಬ ವಿವಿಧೆತೆಯಲ್ಲಿ ಏಕತೆಯನ್ನು ಕಾಣುವ ಭಾರತ ಕಾಣಲು ಸಾಧ್ಯ ಎಂದು ಪ್ರಕಾಶ್ ಅಂಬೇಡ್ಕರ್ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ದೊರೈರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಅಡಿಯಲ್ಲಿ ಜನಪ್ರತಿನಿಧಿಯಾಗಿ ಅಧಿಕಾರ ಸ್ವೀಕರಿಸದ ವ್ಯಕ್ತಿಗಳೇ ಸಂವಿಧಾನ ಬದಲಾವಣೆಯ ಮಾತುಗಳನಾಡುತ್ತಿರುವುದು ದುರದೃಷ್ಟದ ಸಂಗತಿ. ಇವುಗಳ ಬಗ್ಗೆ ಜನತೆಯನ್ನು ಎಚ್ಚರಿಸುವ ಕೆಲಸವನ್ನು ವಿವಿಧ ಸಂಘಟನೆಗಳೊಂದಿಗೆ ಸೇರಿ ಮಾಡಲಾಗುತ್ತಿದೆ ಎಂದರು.

ಜನಾಂದೋಲನ ಮಹಾಮೈತ್ರಿಯ ಸಿ.ಯತಿರಾಜು ಮಾತನಾಡಿ, ಭ್ರಷ್ಟಾಚಾರ ಮುಕ್ತ ಭಾರತ ನಮ್ಮ ಗುರಿ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷದ ರಕ್ಷಣಾ ಇಲಾಖೆಯಲ್ಲಿಯೇ ಭ್ರಷ್ಟಾಚಾರ ನಡೆಸಿರುವುದು ನಿಜಕ್ಕೂ ನಾಚಿಕೇಗೇಡಿನ ವಿಚಾರ. ಐದು ವರ್ಷವಾದರೂ ಪಾರ್ಲಿಮೆಂಟ್‍ನಲ್ಲಿ ಅಂಗಿಕಾರವಾದ ಲೋಕಪಾಲ್ ಮಸೂದೆಯನ್ನು ಜಾರಿಗೆ ತಂದಿಲ್ಲ. ಜನಸಾಮಾನ್ಯರನ್ನು ಚೆಕ್ ಮೂಲಕ ವ್ಯವಹರಿಸಿ ಎಂದು ತಾಕೀತು ಮಾಡುವ ಬಿಜೆಪಿ, ಪಕ್ಷದ ನಿಧಿಯನ್ನು ಮಾತ್ರ ಹಣದ ರೂಪದಲ್ಲಿಯೇ ಪಡೆಯುತ್ತಿದೆ. ಏಕ ಸಂಸ್ಕೃತಿಯ ಹೆಸರಿನಲ್ಲಿ ಈ ದೇಶದ ಐಕ್ಯತೆ, ಸಮಗ್ರತೆಗೆ ದೊಡ್ಡ ದಕ್ಕೆಯಿದ್ದು, ಇದರ ವಿರುದ್ದ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುತ್ತಿದೆ. ಜನವಿರೋಧಿ, ರೈತವಿರೋಧಿ, ಸಂವಿಧಾನ ವಿರೋಧಿ ಕಾನೂನುಗಳು ಜಾರಿಯಲ್ಲಿದ್ದು, ನ್ಯಾಯಾಂಗದ ಮೇಲೂ ಸವಾರಿ ಮಾಡುವಂತಹ ಕೃತ್ಯಗಳು ನಡೆಯುತ್ತಿವೆ. ಇದರ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮುಂದಿನ ಕರ್ನಾಟಕ ಚುನಾವಣೆಯಲ್ಲಿ ಕೋಮುವಾದಿ, ಸಂವಿಧಾನ ವಿರೋಧಿಗಳನ್ನು ಅಧಿಕಾರದಿಂದ ದೂರವಿಡಬೇಕಿದೆ ಎಂದರು.

ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್ ಮಾತನಾಡಿ, ದುರುಯೋಗದ ಹೆಸರಿನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ(ಅಟ್ರಾಸಿಟಿ)ಯನ್ನು ದುರ್ಬಲಗೊಳಿಸುವ ಕೆಲಸ ನಡೆದಿದೆ. ಇದರ ವಿರುದ್ದ ಇಡೀ ರಾಷ್ಟ್ರದಲ್ಲಿ ಎಲ್ಲಿಯೂ ಚಕಾರವೆತ್ತುತ್ತಿಲ್ಲ. ಹಂತ ಹಂತವಾಗಿ ದಲಿತರ ಸಂವಿಧಾನಬದ್ದ ಹಕ್ಕುಗಳನ್ನು ಕಸಿಯುವ ಕೆಲಸ ನಡೆಯುತ್ತಿದೆ. ಭಾರತದ ಸಂವಿಧಾನವೆಚಿದರೆ ಮೀಸಲಾತಿ ಎಂಬ ತಪ್ಪು ಕಲ್ಪನೆ ಬರುವಂತೆ ಮಾಡಲಾಗುತ್ತಿದೆ. ಇದರ ವಿರುದ್ದ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದರು.

ವೇದಿಕೆಯಲ್ಲಿ ಸಿಐಟಿಯು ಸೈಯದ್ ಮುಜೀಬ್,ದಸಂಸ ಪಿ.ಎನ್.ರಾಮಯ್ಯ, ಉದ್ಯಮಿ ಆಶ್ರಫ್ ಹುಸೇನ್, ಮೋಹನ್‍ರಾಜ್ ಎ.ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News