ಗಾಝಾ ಗಡಿಯಲ್ಲಿ ಪ್ರತಿಭಟನೆ: 16 ಫೆಲೆಸ್ತೀನಿಯರ ಹತ್ಯೆಗೈದ ಇಸ್ರೇಲಿ ಪಡೆಗಳು

Update: 2018-03-31 17:16 GMT

ಗಾಝಾ, ಮಾ.31: ಗಾಝಾ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಫೆಲೆಸ್ತೀನಿಯರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ  ಕನಿಷ್ಠ 16 ಫೆಲೆಸ್ತೀನಿಯರು ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದಾರೆ.

ನಿರಾಶ್ರಿತರಿಗೆ ಮತ್ತೆ ದೇಶಕ್ಕೆ ಮರಳುವ ಹಕ್ಕು ನೀಡಬೇಕೆಂದು ಸಾವಿರಾರು ಫೆಲೆಸ್ತೀನಿಯರು ಬೇಲಿ ಹಾಕಲ್ಪಟ್ಟ 65 ಕಿ.ಮೀ. ಉದ್ದದ ಸ್ಥಳದಲ್ಲಿ ಸೇರಿದ್ದರು. ಆರು ವಾರದ ಪ್ರತಿಭಟನೆಗಾಗಿ ಟೆಂಟುಗಳನ್ನು ಕೂಡ ನಿರ್ಮಿಸಲಾಗಿತ್ತು. ಅಲ್ಲಿ ಸುಮಾರು 30,000 ಪ್ರತಿಭಟನಾಕಾರರು ಸೇರಿದ್ದರೆಂದು ಅಂದಾಜಿಸಲಾಗಿದೆ.

ಪ್ರತಿಭಟನಾಕಾರರು ಬೇಲಿಗಳನ್ನು ಕಿತ್ತೆಸೆದಾಗ ಭದ್ರತಾ ಪಡೆಗಳು  ಗುಂಡು ಹಾರಿಸಿದ್ದವು ಎನ್ನಲಾಗಿದೆ. ಕನಿಷ್ಠ ಒಂದು ಕಡೆಯಲ್ಲಿ ಮಿಲಿಟರಿ ಡ್ರೋನ್ ಗಳನ್ನು ಇರಿಸಿ ಅಶ್ರುವಾಯು ಸಿಡಿಸಲು ಸನ್ನದ್ಧವಾಗಿರಿಸಲಾಗಿತ್ತು. ಮೃತಪಟ್ಟವರಲ್ಲಿ 16 ವರ್ಷದ ಬಾಲಕನೂ ಸೇರಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಗಾಝಾದಲ್ಲಿನ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸಬಹುದೆಂದು ತಿಳಿಯಲಾಗಿದೆ. ಗಾಝಾದಲ್ಲಿ ಈ ಪ್ರತಿಭಟನೆಯನ್ನು ದಿ ಮಾರ್ಚ್ ಆಫ್ ದಿ ರಿಟರ್ನ್ ಎಂದು ಕರೆಯಲಾಗಿತ್ತು.

ನಿರಾಶ್ರಿತರ ಮರಳುವ ಹಕ್ಕಿಗಾಗಿ ಹೋರಾಟ

‘ಭೂಮಿ ದಿನ’ದಂದು ಈ ಪ್ರತಿಭಟನೆ ನಡೆದಿದೆ. ಅದು 1976ರಲ್ಲಿ ಇಸ್ರೇಲ್ ಭದ್ರತಾ ಪಡೆಗಳಿಂದ ಇಸ್ರೇಲ್‌ನ 6 ಅರಬ್ ನಾಗರಿಕರು ಹತ್ಯೆಗೀಡಾದ ದಿನ. ಉತ್ತರ ಇಸ್ರೇಲ್‌ನಲ್ಲಿ ಸರಕಾರ ಜಮೀನು ಮುಟ್ಟುಗೋಲು ಹಾಕುತ್ತಿರುವುದನ್ನು ಅವರು ಪ್ರತಿಭಟಿಸುತ್ತಿದ್ದರು.

ಆದರೆ, ಶುಕ್ರವಾರದ ಪ್ರತಿಭಟನೆಯ ಪ್ರಮುಖ ಉದ್ದೇಶ, 1948ರಲ್ಲಿ ಇಸ್ರೇಲ್ ದೇಶ ಸ್ಥಾಪನೆಯಾದಾಗ, ಯಾವ ಗ್ರಾಮಗಳು ಮತ್ತು ಪಟ್ಟಣಗಳಿಂದ ಕುಟುಂಬಗಳು ಪಲಾಯನಗೈದವೋ ಅಥವಾ ಹೊರದಬ್ಬಲ್ಪಟ್ಟವೋ ಅಲ್ಲಿಗೆ ಮರಳುವ ಹಕ್ಕನ್ನು ನಿರಾಶ್ರಿತರಿಗೆ ನೀಡಬೇಕು ಎಂದು ಒತ್ತಾಯಿಸುವುದಾಗಿತ್ತು.

ಆದರೆ, ಹಿಂದಿರುಗುವ ಹಕ್ಕನ್ನು ಇಸ್ರೇಲ್ ತುಂಬಾ ಹಿಂದೆಯೇ ನಿರಾಕರಿಸಿದೆ. ಹಾಗೆ ಮಾಡಿದರೆ, ಅರಬ್ಬರ ಸಾಮೂಹಿಕ ವಲಸೆಯಿಂದ ಬಹುಸಂಖ್ಯಾತ ಯಹೂದಿ ಸಮುದಾಯವೇ ಮಾಯವಾಗಬಹುದು ಎಂಬ ಭೀತಿ ಅದಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News