ದಾವಣಗೆರೆ: ಕರ್ನಾಟಕ ರಂಗಸಂಘಟಕರ ಸಮಾವೇಶ

Update: 2018-03-31 13:47 GMT

ದಾವಣಗೆರೆ,ಮಾ.31:ರಂಗಕಲೆ, ಕಲಾವಿದರನ್ನು ಸರ್ಕಾರ ಗುರುತಿಸಿ ಪ್ರೋತ್ಸಾಹಿಸಬೇಕು. ಕಲೆಗಳು ನಶಿಸಿ ಹೋಗದಂತೆ ಪ್ರದರ್ಶನ ನಡೆಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಿ. ಟಾಕಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಕರ್ನಾಟಕ ರಂಗಪರಿಷತ್ತು ಕೇಂದ್ರ ಸಮಿತಿ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಂಗಸಂಘಟಕರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿನಿಮಾ ಟಿವಿ, ಮೊಬೈಲ್ ಹಾವಳಿಯಿಂದ ರಂಗಕಲಾವಿದರ ಕಲೆ ಗುರುತಿಸುವವರು ಇಲ್ಲದಂತಾಗಿದೆ. ರಂಗಕಲಾವಿದರಿಲ್ಲದೆ ಕಲೆ ಮರೆಯಾಗುತ್ತಿಲ್ಲ. ನೋಡುವವರಿಲ್ಲದೆ ರಂಗಕಲೆ ನಶಿಸುತ್ತಿದೆ. ನಾಟಕವನ್ನು ಮಾಡುವವರು ಬಹಳ ಜನ ಕಲಾವಿದರಿದ್ದಾರೆ. ಆದರೆ, ನಾಟಕಗಳನ್ನು ನೋಡಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವಂತವರು ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು,  ಕಲಾವಿದರು ಕಲೆಯನ್ನು ಪ್ರೀತಿಸಿ ಆರಾಧಿಸಬೇಕು. ಕಲೆಯನ್ನು ಕಾಟಾಚಾರಕ್ಕಾಗಿ ಆರಾಧನೆ ಮಾಡಬಾರದು. ಉತ್ತಮ ಗುಣನಡತೆಯ ಕಲೆ ಇದ್ದರೆ ಮಾನ್ಯತೆ ದೊರೆಯುತ್ತದೆ. ಮೊದಲೆಲ್ಲಾ  ಅಜ್ಜ ಅಜ್ಜಿ ಕಥೆಗಳನ್ನು ಹೇಳುತ್ತಿದ್ದರು. ಆದರಿಂದು ಅದನ್ನು ಹೇಳುವವರು ಹಾಗೂ ಕೇಳುವವರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಸರ್ಕಾರ ರಂಗಕಲೆ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ರಂಗಕಲೆ, ಕಲಾವಿದ ಉಳಿಯಲು ಸಾಧ್ಯ. ಮುಂದಿನ ಪೀಳಿಗೆಗೆ ರಂಗಕಲೆಯನ್ನು ಪರಿಚಯಿಸುವ ಕಾರ್ಯವಾಗಬೇಕಿದೆ ಎಂದರು.

ಚನ್ನಗಿರಿಯ ಕೇದಾರಪೀಠ ಶಾಖಾಮಠದ ಕೇದಾರ ಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ಕಾರದಿಂದ ಕಲಾವಿದರನ್ನು ಗುರುತಿಸುವ, ಅವರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ. ಪಠ್ಯಪುಸ್ತಕಗಳಲ್ಲಿ ಕಲಾವಿದರ ಬಗ್ಗೆ ತೋರಿಸಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳು ಕಲಾವಿದರಿಗೆ ಸಿಗುವಂತಾಗಬೇಕು. ಇನ್ನು ಮುಂದಾದರು ಕಲಾವಿದರನ್ನು ಪ್ರೋತ್ಸಾಹಿಸುವಂತ ಕೆಲಸವಾಗಬೇಕು ಎಂದ ಅವರು, ಸಂಗೀತದಿಂದ ನೆಮ್ಮದಿ ಜೀವನವನ್ನು ಕಾಣಬಹುದು. ಕಲಾವಿದರು ಸಂಘಟಿತರಾಗಬೇಕು. ಆಗ ಸೌಲಭ್ಯಗಳು ದೊರೆಯುತ್ತದೆ ಎಂದರು.

ಸಮಾವೇಶದಲ್ಲಿ ರಂಗಸಂಘಟಕಕಾರ ಸತೀಶ್ ಕುಲಕರ್ಣಿ, ರಂಗಸಂಘಟಕಕಾರ ಸಮಾವೇಶದ ಅಧ್ಯಕ್ಷ ಪ್ರಸಾದ್ ರಕ್ಷಿದಿ, ಹರಪನಹಳ್ಳಿಯ ಉಪನ್ಯಾಸಕ ಹೆಚ್. ಮಲ್ಲಿಕಾರ್ಜುನ್, ರಂಗಪರಿಷತ್ ನ ಅಧ್ಯಕ್ಷ ಜಯಶಂಕರ್ ಬೆಳಗುಂಬ, ರಂಗಪರಿಷತ್‍ನ ಜಿಲ್ಲಾಧ್ಯಕ್ಷ ಎನ್.ಎಸ್. ರಾಜು, ರಂಗಪರಿಷತ್ ನ ಕಾರ್ಯದರ್ಶಿ ಸಿ.ಎಂ. ಸುರೇಶ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News