ಕೆ.ಎಸ್.ಈಶ್ವರಪ್ಪಗೆ ಶಿವಮೊಗ್ಗದ ಟಿಕೆಟ್ : ಪ್ರಥಮ ಬಾರಿಗೆ ಬಹಿರಂಗ ಸ್ಪಷ್ಟನೆ ನೀಡಿದ ಯಡಿಯೂರಪ್ಪ
ಶಿವಮೊಗ್ಗ, ಮಾ. 31: ತಮ್ಮ ಬಲಗೈ ಭಂಟ ಎಸ್.ರುದ್ರೇಗೌಡರನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಕಸರತ್ತು ನಡೆಸಿ ವಿಫಲವಾಗಿರುವ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು, ಕೆ.ಎಸ್.ಈಶ್ವರಪ್ಪರೇ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ಟಿಕೆಟ್ ಆಕಾಂಕ್ಷಿಯಾಗಿರುವ ಪಕ್ಷದ ಜಿಲ್ಲಾಧ್ಯಕ್ಷರಾದ ಎಸ್.ರುದ್ರೇಗೌಡರನ್ನು ಮುಂಬರುವ ದಿನಗಳಂದು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕೆ.ಎಸ್.ಈಶ್ವರಪ್ಪ ಹಾಗೂ ಎಸ್.ರುದ್ರೇಗೌಡ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಬಿ.ಎಸ್.ಯಡಿಯೂರಪ್ಪರವರು ಕೆ.ಎಸ್.ಈಶ್ವರಪ್ಪಗೆ ಈ ಬಾರಿ ಟಿಕೆಟ್ ನೀಡದಿರುವ ನಿರ್ಧಾರ ಕೈಗೊಂಡಿದ್ದರು. ವರಿಷ್ಠರ ಬಳಿ ಎಸ್.ರುದ್ರೇಗೌಡ ಪರವಾಗಿ ಬ್ಯಾಟಿಂಗ್ ನಡೆಸಿದ್ದರು.
ತಮಗೆ ಟಿಕೆಟ್ ಕೈ ತಪ್ಪಿಸಲು ಬಿಎಸ್‍ವೈ ಮತ್ತವರ ಬೆಂಬಲಿಗರು ನಡೆಸುತ್ತಿದ್ದ ತಂತ್ರಕ್ಕೆ ಪ್ರತಿಯಾಗಿ ಕೆಎಸ್‍ಇ ಕೂಡ ಪ್ರತಿ ತಂತ್ರ ರೂಪಿಸಿದ್ದರು. ಶಿವಮೊಗ್ಗದಿಂದ ಟಿಕೆಟ್ ಖಚಿತಪಡಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸಿದ್ದರು. ವರಿಷ್ಠರ ಹಂತದಲ್ಲಿ ಲಾಬಿ ನಡೆಸಿದ್ದರು. ಕಳೆದ ವರ್ಷ ಬಿಎಸ್‍ವೈ ವಿರುದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಬಹಿರಂಗ ಸಮರ ಕೂಡ ಸಾರಿದ್ದರು.
ಟಿಕೆಟ್‍ಗೆ ಸಂಬಂಧಿಸಿದಂತೆ ಬಿಎಸ್‍ವೈ ಹಾಗೂ ಕೆಎಸ್‍ಇ ನಡುವೆ ನಡೆಯುತ್ತಿದ್ದ ಕಲಹದ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರವರೇ ಮಧ್ಯ ಪ್ರವೇಶಿಸಿ ಶಿವಮೊಗ್ಗದ ಅಭ್ಯರ್ಥಿ ಆಯ್ಕೆಯ ಜವಾಬ್ದಾರಿ ತಮಗೆ ಸೇರಿದ್ದೆಂದು ಹೇಳಿದ್ದರು. ಪಕ್ಷದಲ್ಲಿನ ಹಿರಿತನದ ಆಧಾರದ ಮೇಲೆ ಕೆಎಸ್‍ಇಗೆ ಟಿಕೆಟ್ ನೀಡಲು ಅಮಿತ್ ಶಾ ತೀರ್ಮಾನಿಸಿದ್ದರು.
ಇತ್ತೀಚೆಗೆ ಶಿವಮೊಗ್ಗ ನಗರಕ್ಕೆ ಅಮಿತ್ ಶಾ ಭೇಟಿ ನೀಡಿದ್ದ ವೇಳೆ ಬಿಎಸ್‍ವೈ ಹಾಗೂ ಕೆಎಸ್‍ಇ ಜೊತೆ ಗುಪ್ತ ಸಮಾಲೋಚನೆ ನಡೆಸಿದ್ದರು. ಈಶ್ವರಪ್ಪಗೆ ಟಿಕೆಟ್ ನೀಡುವ ನಿರ್ಧಾರ ಪ್ರಕಟಿಸಿ, ಒಟ್ಟಾಗಿ ಚುನಾವಣೆ ಎದುರಿಸುವಂತೆ ತಿಳಿ ಹೇಳಿದ್ದರು ಎಂಬ ಮಾಹಿತಿ ಹರಿದಾಡುತ್ತಿತ್ತು. ಇದೀಗ ಸ್ವತಃ ಬಿಎಸ್‍ವೈರವರು ಕೆಎಸ್‍ಇ ಸ್ಪರ್ಧೆ ದೃಢಪಡಿಸುವ ಮೂಲಕ ಟಿಕೆಟ್ ಫೈಟ್‍ಗೆ ಅಂತಿಮ ತೆರೆ ಎಳೆದಿದ್ದಾರೆ.