×
Ad

ಶಿವಮೊಗ್ಗದಲ್ಲಿ ಸಿಎಂ ಭಾವಚಿತ್ರವಿದ್ದ ಲ್ಯಾಪ್‍ಟ್ಯಾಪ್ ವಿತರಣೆಗೆ ಬಿಜೆಪಿ ಯುವ ಮೋರ್ಚಾ ಆಕ್ಷೇಪ : ವಾಹನ ವಶಕ್ಕೆ

Update: 2018-03-31 20:22 IST

ಶಿವಮೊಗ್ಗ, ಮಾ. 31: ವಿಧಾನಸಭೆ ಮಾದರಿ ನೀತಿ - ಸಂಹಿತೆ ಜಾರಿಯ ನಡುವೆಯೇ  ಕಾಲೇಜುಗಳಿಗೆ ಸಿಎಂ ಸಿದ್ದರಾಮಯ್ಯ ಭಾವಚಿತ್ರವಿರುವ ಲ್ಯಾಪ್‍ಟ್ಯಾಪ್ ವಿತರಣೆ ಮಾಡುತ್ತಿರುವ ಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಲ್ಯಾಪ್‍ಟ್ಯಾಪ್ ಹೊತ್ತು ತಂದಿದ್ದ ಟಾಟಾ ಏಸ್ ಸರಕು ಸಾಗಾಣೆ ವಾಹನವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡ ಘಟನೆ ಶನಿವಾರ ಶಿವಮೊಗ್ಗ ನಗರದಲ್ಲಿ ನಡೆಯಿತು. 

ಬಿ.ಹೆಚ್.ರಸ್ತೆಯ ಸರ್ಕಾರಿ ಮಹಿಳಾ ಕಾಲೇಜ್‍ನಲ್ಲಿ ಈ ಘಟನೆ ನಡೆಯಿತು. ಬಿಜೆಪಿ ಕಾರ್ಯಕರ್ತರ ಆಕ್ಷೇಪದ ಹಿನ್ನೆಲೆಯಲ್ಲಿ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚುನಾವಣಾಧಿಕಾರಿಗಳು, ಕಾಲೇಜ್‍ಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಸುಮಾರು 158 ಲ್ಯಾಪ್‍ಟ್ಯಾಪ್ ಹೊತ್ತು ತಂದಿದ್ದ ವಾಹನವನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ವಿದ್ಯಾರ್ಥಿಗಳೀಗೆ ಲ್ಯಾಪ್‍ಟ್ಯಾಪ್ ವಿತರಣೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಮಾದರಿ ನೀತಿ-ಸಂಹಿತೆ ಜಾರಿಯಾದ ನಂತರ, ಸಿಎಂ ಸಿದ್ದರಾಮಯ್ಯ ಭಾವಚಿತ್ರವಿರುವ ಲ್ಯಾಪ್‍ಟ್ಯಾಪ್ ವಿತರಣೆ ಮಾಡುವುದು ಸರಿಯಲ್ಲ. ಇದು ಮತದಾರರ ಮೇಲೆ ಪ್ರಭಾವ ಬೀರುವ ಕೃತ್ಯವಾಗಿದೆ. ಈ ಕಾರಣದಿಂದ ಸಂಬಂಧಪಟ್ಟವರ ಮೇಲೆ ಮಾದರಿ ನೀತಿ - ಸಂಹಿತೆಯಡಿ ಪ್ರಕರಣ ದಾಖಲಿಸಬೇಕು' ಎಂದು ಚುನಾವಣಾಧಿಕಾರಿಗಳಿಗೆ ಬಿಜೆಪಿ ಯುವ ಮೋರ್ಚಾ ಮುಖಂಡ ಹೃಷಿಕೇಶ್ ಪೈರವರು ಆಗ್ರಹಿಸಿದ್ದಾರೆ. 

ಬೆಂಗಳೂರಿನಿಂದ ಒಂದು ವಾರದ ಮೊದಲೇ ಲ್ಯಾಪ್‍ಟ್ಯಾಪ್ ಹೊತ್ತ ವಾಹನ ಹೊರಟಿತ್ತು. ವಿವಿಧ ಜಿಲ್ಲೆಗಳಲ್ಲಿನ ಕಾಲೇಜ್‍ಗಳಿಗೆ ಲ್ಯಾಪ್‍ಟ್ಯಾಪ್ ವಿತರಣೆ ಮಾಡಿ ಶಿವಮೊಗ್ಗ ನಗರಕ್ಕೆ ಆಗಮಿಸಿತ್ತು. ನಗರದ ವಿವಿಧ ಕಾಲೇಜ್‍ಗಳಿಗೆ ಲ್ಯಾಪ್‍ಟ್ಯಾಪ್ ವಿತರಣೆ ಮಾಡಿ, ಸರ್ಕಾರಿ ಮಹಿಳಾ ಕಾಲೇಜ್‍ಗೆ ಆಗಮಿಸಿದ್ದ ವೇಳೆ, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದರು.

'ಈ ಲ್ಯಾಪ್‍ಟ್ಯಾಪ್‍ಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿಲ್ಲ. ಕಾಲೇಜುಗಳಿಗೆ ಮಂಜೂರಾಗಿರುವ ಲ್ಯಾಪ್‍ಟ್ಯಾಪ್‍ಗಳನ್ನು ತಂದು ದಾಸ್ತಾನು ಮಾಡಲಾಗುತ್ತಿದೆ' ಎಂದು ಕಾಲೇಜು ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಮತ್ತೊಂದೆಡೆ ಲ್ಯಾಪ್‍ಟ್ಯಾಪ್ ಹೊತ್ತು ತಂದ ವಾಹನ ಮತ್ತು ಚಾಲಕನನ್ನು ಚುನಾವಣಾಧಿಕಾರಿಗಳು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಕುರಿತಂತೆ ಮಾಹಿತಿ ಕಲೆ ಹಾಕಿದ ನಂತರ, ಮಾದರಿ ನೀತಿ - ಸಂಹಿತೆ ಉಲ್ಲಂಘನೆಯಾಗಿದೆ ಇಲ್ಲವೇ ಎಂಬುವುದನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಸಿಎಂ ಪೋಟೋ ಸರಿಯಲ್ಲ : ಹೃಷಿಕೇಶ್ ಪೈ
ವಿದ್ಯಾರ್ಥಿಗಳಿಗೆ ಲ್ಯಾಪ್‍ಟ್ಯಾಪ್ ವಿತರಣೆ ಮಾಡುವುದಕ್ಕೆ  ಆಕ್ಷೇಪವಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರವಿರುವ ಲ್ಯಾಪ್‍ಟ್ಯಾಪ್ ವಿತರಣೆ ಮಾಡುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಮತದಾರರ ಮೇಲೆ ಪ್ರಭಾವ ಬೀರುವಂತಾಗುತ್ತದೆ' ಎಂದು ಬಿಜೆಪಿ ಯುವ ಮೋರ್ಚಾ ಮುಖಂಡ ಹೃಷಿಕೇಶ್ ಪೈ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News