ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರು ಸ್ಪರ್ಧಿಸಬಹುದು: ಸಿಎಂ ಸಿದ್ದರಾಮಯ್ಯ
ಮೈಸೂರು,ಮಾ.31: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧೆಮಾಡಬಹುದು. ಯಾರನ್ನು ಆಯ್ಕೆ ಮಾಡಬೇಕು ಎಂಬುದು ಜನರಿಗೆ ಬಿಟ್ಟಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಿಎಂ ಸಿದ್ದರಾಮಯ್ಯ ನಿನ್ನೆಯಷ್ಟೇ ಬಂಡಿಪುರ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆದು ಶನಿವಾರ ಬೆಳಿಗ್ಗೆ ಮೈಸೂರಿಗೆ ಆಗಮಿಸಿ ಲಕ್ಷ್ಮೀಪುರಂನಲ್ಲಿರುವ ರಮ್ಯಾ ಹೋಟೆಲ್‍ನಲ್ಲಿ ತಮ್ಮ ಹಳೆಯ ಸ್ನೇಹಿತರೊಡಗೂಡಿ ಉಪಹಾರ ಸೇವಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ನಿಮ್ಮ ಪುತ್ರನ ವಿರುದ್ಧ ಸ್ಪರ್ಧೆಮಾಡುತ್ತಾರಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಯಾರು ಗೆಲ್ಲಬೇಕು ಎಂಬುದನ್ನು ಜನರು ತೀರ್ಮಾನ ಮಾಡಲಿದ್ದಾರೆ. ಯಾರು ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೋ ಅವರನ್ನು ವರುಣಾ ಕ್ಷೇತ್ರದ ಜನತೆ ಆಶೀರ್ವಾದಿಸುತ್ತಾರೆ ಎಂದು ಹೇಳಿದರು.
ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಸಂವಿಧಾನ ಕುರಿತ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅನಂತ್ ಕುಮಾರ್ ಹೆಗಡೆ ಒಬ್ಬ ಮತಾಂಧ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರದಲ್ಲಿ ನಾನು ತೊಡಗಿದ್ದು, ಹಲವು ಗ್ರಾಮಗಳಿಗೆ ಭೇಟಿ ನೀಡಲಿದ್ದೇನೆ. ಈ ಸಂದರ್ಭದಲ್ಲಿ ನಿಮ್ಮ ಗ್ರಾಮಗಳ ಅಭಿವೃದ್ಧಿ ಬಯಸುವ ಒಬ್ಬ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಜನರ ಬಳಿ ಮನವಿ ಮಾಡುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾಜಿ ಶಾಸಕ ಎಂ.ಸತ್ಯನಾರಾಯಣ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ, ಮಾವಿನಹಳ್ಳಿ ಸಿದ್ದೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.