×
Ad

ಶಿವಮೊಗ್ಗ: ಚುನಾವಣಾ ಅಕ್ರಮಗಳ ತಡೆಗೆ ಕಟ್ಟೆಚ್ಚರ

Update: 2018-03-31 22:10 IST

ಶಿವಮೊಗ್ಗ,ಮಾ.31:  ಚುನಾವಣಾ ಅಕ್ರಮಗಳನ್ನು ಮಟ್ಟ ಹಾಕಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ಎಂ.ಲೋಕೇಶ್ ಅವರು ಅಧಿಕಾರಿಗಳ ತಂಡದೊಂದಿಗೆ ಖುದ್ದಾಗಿ ವಾಹನಗಳನ್ನು ತಪಾಸಣೆ ಮಾಡುವ ಮೂಲಕ ಚುರುಕು ಮೂಡಿಸಿದರು.

ಶಿವಮೊಗ್ಗ ಹೊರವಲಯದ ಎಂಆರ್ ಎಸ್ ವೃತ್ತದ ಸಮೀಪ ವಾಹನಗಳ ತಪಾಸಣಾ ಕಾರ್ಯಾಚರಣೆ ನಡೆಯಿತು. ಒಂದು ಗಂಟೆಗಳ ಅವಧಿಯಲ್ಲಿ 50ಕ್ಕೂ ಅಧಿಕ ಕಾರು, ಗೂಡ್ಸ್ ವಾಹನಗಳು ಸೇರಿದಂತೆ ಪ್ರತಿಯೊಂದು ವಾಹನಗಳ ತಪಾಸಣೆ ಕಾರ್ಯವನ್ನು ಕೈಗೊಳ್ಳಲಾಯಿತು.

ಚುನಾವಣೆಯನ್ನು ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ. ಸಾರ್ವಜನಿಕರು ರೂ.50 ಸಾವಿರಕ್ಕಿಂತ ಅಧಿಕ ಮೊತ್ತದ ಹಣವನ್ನು ಯಾವುದೇ ಸಮರ್ಪಕ ದಾಖಲೆಗಳಿಲ್ಲದೆ ಕೊಂಡೊಯ್ಯುವಂತಿಲ್ಲ. ಚುನಾವಣಾ ಅಕ್ರಮಗಳ ಮೇಲೆ ನಿಗಾ ವಹಿಸಲು ಈಗಾಗಲೆ 26ಫ್ಲೈಯಿಂಗ್ ಸ್ಕ್ವಾಡ್, 28 ಸ್ಟಾಟಿಕ್ ಸರ್ವೈಲೆನ್ಸ್ ತಂಡಗಳನ್ನು ರಚಿಸಲಾಗಿದೆ. ತಾತ್ಕಾಲಿಕ ಚೆಕ್‍ಪೋಸ್ಟ್ ಗಳನ್ನು ಆರಂಭಿಸಲಾಗಿದ್ದು, ತಪಾಸಣೆ ಚುರುಕುಗೊಳಿಸಲು ಸೂಚನೆ ನೀಡಲಾಗಿದೆ. 

ಗುಪ್ತದಳದೊಂದಿಗೆ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಚುನಾವಣಾ ಅಕ್ರಮಗಳ ಕುರಿತು ಯಾವುದೇ ಮಾಹಿತಿ ಇದ್ದರೂ ಕಂಟ್ರೋಲ್ ರೂಂಗೆ ದಿನದ 24ಗಂಟೆಗಳ ಕಾಲ ಕರೆ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ. ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ,ಅಡಿಷನಲ್ ಎಸ್ಪಿ ಮುತ್ತುರಾಜ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸೇರಿದಂತೆ ಇಲಾಖಾ ಅಧಿಕಾರಿಗಳು ತಪಾಸಣೆ ಸಂದರ್ಭದಲ್ಲಿ ಹಾಜರಿದ್ದು, ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News