ರಾಜಕೀಯ ಧ್ರುವೀಕರಣ ಏನಾಗಲಿದೆ ಎಂಬುದನ್ನು ಕಾದು ನೋಡಿ : ಎಚ್.ಡಿ. ದೇವೇಗೌಡ

Update: 2018-03-31 16:49 GMT

ಚಿಕ್ಕಬಳ್ಳಾಪುರ,ಮಾ.31: ಮುಂದಿನ 48 ದಿನಗಳಲ್ಲಿ ರಾಜ್ಯದ ಭವಿಷ್ಯ ತೀರ್ಮಾನವಾಗಲಿದ್ದು, ರಾಜಕೀಯ ಧ್ರುವೀಕರಣ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ  ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಸ್ತುತ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಿಪಿಎಂ ಹಾಗೂ ಸಿಪಿಐ  ಜೊತೆ ಹೊಂದಾಣಿಕೆಗೆ ಮುಂದಾಗಿದ್ದೆವು ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಜೆಡಿಎಸ್ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ, ಅವರು ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಆವರೊಂದಿಗೆ ಯಾವ ರೀತಿಯ ಸಂಬಂಧ ಹೊಂದಿದ್ದರು ಎಂಬುದು ತಮಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.

ಕಾರ್ಯಕರ್ತರು ಎದೆಗುಂದದೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕಿದೆ. ಕಾಂಗ್ರೆಸ್ ಕಳೆದ 5 ವರ್ಷಗಳಲ್ಲಿ ಮಾಡಿರುವ ದೌರ್ಜನ್ಯ, ಭ್ರಷ್ಟಚಾರದ ಬಗ್ಗೆ ಜನರಿಗೆ ತಿಳಿಸಿ ಮತ ಕೇಳಬೇಕಿದೆ. ಪ್ರಸ್ತುತ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ನಡುವೆ ಹೋರಾಟ ನಡೆಯುತ್ತಿದ್ದು, ಕಾರ್ಯಕರ್ತರು ಇದನ್ನು ಸವಾಲಾಗಿ ಸ್ವೀಕರಿಸಿ, ಪಕ್ಷದ ಗೆಲುವಿಗೆ ದುಡಿಯಬೇಕು ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರದೊಂದಿಗೆ ತಮಗೆ 60 ವರ್ಷಗಳ ನಂಟಿದೆ. ಮಂಚನಬಲೆಯ ಹನುಮಂತಪ್ಪ ಎಂಬ ರೈತರ ಮನೆಯಲ್ಲಿ ಆಲೂಗೆಡ್ಡೆ ಬಿತ್ತನೆ ಬೀಜ ಖರೀದಿಸಿ, ಅವರ ಮನೆಯಲ್ಲಿಯೇ ಮಲಗುತ್ತಿದ್ದೆ ಎಂದು ಹಳೆಯ ನೆನಪುಗಳನ್ನು ದೇವೇಗೌಡರು ಮೆಲಕು ಹಾಕಿದರು.

ಸಿ.ಆರ್. ಮನೋಹರ್ ರವರು ಬಾಗೇಪಲ್ಲಿಯಿಂದ ಸ್ಪರ್ಧಿಸಲಿದ್ದು, ಅವರ ಪರವಾಗಿ ಪ್ರಚಾರ ನಡೆಸಲು ಮುಂದಿನ ವಾರ ಬಾಗೇಪಲ್ಲಿಗೆ ಆಗಮಿಸುವುದಾಗಿ ಮಾಜಿ ಪ್ರಧಾನಿ ಘೋಷಿಸಿದರು. ಭ್ರಷ್ಟ ಸಿದ್ದರಾಮಯ್ಯನಿಗೆ ಉತ್ತರ ನೀಡಲು ಕಾರ್ಯಕರ್ತರೆಲ್ಲರು ಸಜ್ಜಾಗಿ ಎಂದು ಕರೆ ನೀಡಿದರು.

ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಬಾಬ್ರಿ ಮಸೀದಿ ಧ್ವಂಸ ಮಾಡಿದಾಗ ಅಸ್ತಿತ್ವದಲ್ಲಿದ್ದಿದ್ದು ಕಾಂಗ್ರೆಸ್ ಸರ್ಕಾರ, ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದರೆ 17 ಲಕ್ಷ ಇದ್ದ ಸೈನಿಕರ ಸಹಾಯ ಪಡೆದು ತಡೆಯಬಹುದಿತ್ತು. ಆದರೆ ಅಲ್ಪಸಂಖ್ಯಾತರ ವಿರೋಧಿ ಕಾಂಗ್ರೆಸ್ ಇಂತಹ ಕೆಲಸಕ್ಕೆ ಮುಂದಾಗಲಿಲ್ಲ ಎಂದರು.

ಸ್ವತಂತ್ರ ಅಭ್ಯರ್ಥಿಯಾಗಿ ಜಯಗಳಿಸಿದ್ದ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಕರೆತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಜೊತೆಗೆ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ಮಾಡಿದ ದೇವೇಗೌಡರೇ ಯಾರು ಎಂದು ಪ್ರಶ್ನಿಸುವ ಮಟ್ಟಕ್ಕೆ ಅವರ ಅಹಂಕಾರ ಬೆಳೆದಿರುವುದು ಶೋಚನೀಯ ಎಂದರು.

2004ರ ಚುನಾವಣೆಯಲ್ಲಿ ಇದೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮನಸ್ಸು ದೇವೇಗೌಡರಿಗಿತ್ತು. ಆದರೆ ಅಂದಿನ ಕಾಂಗ್ರೆಸ್ ಮತ್ತು ಸೋನಿಯಾರವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಅದು ಕೈಗೂಡಲಿಲ್ಲ. ಅಂತಹ ಕಾಂಗ್ರೆಸ್‍ನಲ್ಲಿದ್ದು, ಇಂದು ದೇವೇಗೌಡರ ಬಗ್ಗೆ ಮಾತನಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ವೋಟಿನ ಮೂಲಕ ಬುದ್ದಿ ಕಲಿಸುವಂತೆ ಕರೆ ನೀಡಿದರು.

ರೈತ ಪರ ಕಾಳಜಿ ಹೊಂದಿರುವ ಏಕೈಕ ನಾಯಕ ದೇವೇಗೌಡರು. ರಾಹುಲ್ ಗಾಂದಿ ಇನ್ನೂ ಯುವಕ. ರಾಜ್ಯದ ವಿಷಯ ಹಾಗೂ ದೇವೇಗೌಡರ ಹಿನ್ನೆಲೆ ಅರಿಯಬೇಕಾದ ಅಗತ್ಯವಿದೆ. ಅಂತಹ ರಾಹುಲ್ ಗಾಂಧಿ ಅವರಿಂದ ಸಿದ್ದರಾಮಯ್ಯ ಇಲ್ಲಸಲ್ಲದನ್ನು ಹೇಳಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಮೇಲೆ ಕಾಂಗ್ರೆಸ್‍ಗೆ ಯಾವ ಮಮಕಾರವು ಇಲ್ಲ, ಕೇವಲ ವೋಟಿಗಾಗಿ ಮುಸ್ಲಿಮರನ್ನು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‍ಗೆ ಅಲ್ಪಸಂಖ್ಯಾತರ ಉದ್ದಾರ ಅಗತ್ಯವಿಲ್ಲ ಎಂದು ಹೇಳಿದರು.

ದೇವರಾಜ ಅರಸು, ಬಂಗಾರಪ್ಪರಿಗೆ ಹೋಲಿಸಿದರೆ ಸಿದ್ದರಾಮಯ್ಯ ಯಾವ ನಾಯಕನೂ ಅಲ್ಲ. ಆದರೆ ಅಂತಹ ನಾಯಕರನ್ನೇ ಜಾಡಿಸಿ ಒದ್ದ ಕಾಂಗ್ರೆಸ್ ಸಿದ್ದರಾಮಯ್ಯನವರಿಗೆ ಎಂತಹ ಗೌರವ ಕೊಡಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ ಎಂದು ಲೇವಡಿ ಮಾಡಿದರು.

ಕಣ್ಣೀರಿಟ್ಟ ಬಚ್ಚೇಗೌಡ: ಮಾಜಿ ಶಾಸಕ ಹಾಗೂ ಹಾಲಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಅವರು ವೇದಿಕೆಯಲ್ಲಿ ಮಾತನಾಡುವ ವೇಳೆ, ಹಲವರು ಪಕ್ಷ ತೊರೆದು ಹೋದರು ಆದರೆ ತಮ್ಮ ಮೇಲೆ ವಿಶ್ವಾಸ ಇಟ್ಟುಕೊಂಡಿರುವ ಕಾರ್ಯಕರ್ತರು ತಮ್ಮೊಂದಿಗೇ ಇದ್ದಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಕಾರ್ಯಕರ್ತರೇ ಸಾಕ್ಷಿ ಎಂದು ಕಣ್ಣೀರು ಹಾಕಿದರು, ಈ ವೇಳೆ ವೇದಿಕೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಬಚ್ಚೇಗೌಡರನ್ನು ಸಮಾಧಾನ ಪಡಿಸಿದರು.

ಸಮಾವೇಶದಲ್ಲಿ ವಿಧಾನಪರಿಷತ್ ಸದಸ್ಯರಾದ ಶರವಣ, ಸಿ.ಆರ್. ಮನೋಹರ್, ಜಫ್ರುಲಾಖಾನ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಂದಿ ಆಂಜಿನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News