ದಲಿತರ ಮೇಲೆ ಕಾಳಜಿ ಇದ್ದರೆ ಎಸ್ಸಿ-ಎಸ್ಟಿ ಕಾನೂನು ಜಾರಿಗೊಳಿಸಲಿ : ಅಮಿತ್ ಶಾಗೆ ಸಂಸದ ಧ್ರುವನಾರಾಯಣ ತಿರುಗೇಟು

Update: 2018-03-31 16:53 GMT

ಮೈಸೂರು,ಮಾ.31: ದಲಿತರ ಮೇಲೆ ನಿಜವಾದ ಕಾಳಜಿ ಇದ್ದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ  ಎಸ್ಸಿ,ಎಸ್ಟಿ ಕಾನೂನನ್ನು ಜಾರಿಗೊಳಿಸಲಿ ಎಂದು ಸಂಸದ ಧ್ರುವನಾರಾಯಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗೆ ತಿರುಗೇಟು ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿ ಇದ್ದ ವೇಳೆ ಪರಿಶಿಷ್ಟ ಜಾತಿ-ಪಂಗಡಗಳಿಗೆ ಎಷ್ಟು ಅನುದಾನ ನೀಡಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಷ್ಟೆಷ್ಟು ಅನುಧಾನ ನೀಡಿದೆ ಎಂಬುದನ್ನು ಅಂಕಿ ಅಂಶಗಳ ಸಮೇತ ವಿವರಿಸಿದರು.

ದಲಿತರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಾಕಷ್ಟು ಕೆಲಸ ಮಾಡಿದ್ದು, ಅದನ್ನು ಸಹಿಸಲಾಗದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೈಸೂರು-ಚಾಮರಾಜನಗರ ಪ್ರವಾಸದಲ್ಲಿ ದಲಿತರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಅಭಿವೃದ್ಧಿಗಾಗಿ ವಿಶೇಷ ಅಧಿವೇಶನ ಕರೆದು ಎಸ್ಸಿ, ಎಸ್ಟಿ ಕಾನೂನನ್ನು ಜಾರಿಗೆ ತಂದರು. ಹಾಗಾಗಿ ಎಸ್‍ಸಿಪಿ, ಟಿಎಸ್‍ಪಿ  ಯೋಜನೆಯಡಿಯಲ್ಲಿ ಪರಿಶಿಷ್ಟಜಾತಿ-ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ನೀಡಿದರು. ಹಾಗಾಗಿ ಸಾಕಷ್ಟು ಪರಿಶಿಷ್ಟ ಜಾತಿ- ಪಂಗಡಗಳ ಅಭಿವೃದ್ಧಿಯಾಗಿದೆ ಎಂದು ಹೇಳಿದರು.

ಬಿಜೆಪಿ ಅಧಿಕಾರದಲ್ಲಿ ಇದ್ದ ವೇಳೆ ದಲಿತರಿಗೆ ಎಷ್ಟು ಅನುಧಾನ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಷ್ಟು ನೀಡಿದೆ ಎಂದು ದಾಖಲೆ ಸಮೇತ ನೋಡಲಿ. ದಲಿತರ ಅಭಿವೃದ್ಧಿಗೆ ಬಿಜೆಪಿಯವರ ಕೊಡುಗೆ ಶೂನ್ಯ, ಅಮಿತ್ ಶಾಗೆ ಮಾಹಿತಿ ಕೊರತೆಯಿಂದ ಏನೇನೋ ಮಾತನಾಡಿದ್ದಾರೆ. ಇವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಖಂಡಿಸಿದರು.

ಕಳೆದ 15 ವರ್ಷಗಳಿಂದ ಗುಜರಾತ್‍ನಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಅಲ್ಲೇಕೆ ಇದುವರೆಗೂ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡುತ್ತಿಲ್ಲ? ಇನ್ನೂ ದೇಶದ 21 ದೇಶದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ನಾವು ಮಾಡಿರುವ ಕಾನೂನನ್ನು ಏಕೆ ಜಾರಿಮಾಡಿಲ್ಲ? ದಲಿತರ ಬಗ್ಗೆ ಆಸಕ್ತಿ ಇದ್ದರೆ ಜನಸಂಖ್ಯೆಗೆ ಅನುಗುಣವಾಗಿ ಅನುಧಾನ ನೀಡಲಿ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News