×
Ad

ಮಂಡ್ಯ: ಕೃಷಿಕರ ಜೊತೆ ಅಮಿತ್ ಶಾ ಸಂವಾದದಲ್ಲಿ ಖಾಲಿ ಖಾಲಿ ಖುರ್ಚಿಗಳು!

Update: 2018-03-31 23:14 IST

ಮಂಡ್ಯ, ಮಾ.31: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಾವಯವ ಕೃಷಿ ಉತ್ತೇಜನಕ್ಕೆ ವಿಶೇಷ ಹೆಜ್ಜೆಗಳನ್ನಿಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ಬಿಜೆಪಿ ವತಿಯಿಂದ ಸಾವಯವ ಕೃಷಿಕರು ಹಾಗೂ ಮಹಿಳಾ ಸಹಕಾರಿಗಳ ಜತೆ ಸಂವಾದ ಕಾರ್ಯಕ್ರಮ ನಡೆಯಿತು.

ಖಾಲಿ ಖಾಲಿ ಕುರ್ಚಿಗಳು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಬೆರಳಣಿಕೆಯಷ್ಟು ರೈತರು ಮಾತ್ರ ಪಾಲ್ಗೊಂಡಿದ್ದು, ಖುರ್ಚಿಗಳು ಖಾಲಿಬಿದ್ದಿದ್ದವು. ಕಾರ್ಯಕ್ರಮದ ವೇದಿಕೆಯ ಮುಂಭಾಗ ಹಲವು ಕುರ್ಚಿಗಳು ಖಾಲಿಯಿದ್ದವು. ಇದರಿಂದ ಬಿಜೆಪಿ ನಾಯಕರು ಮುಜುಗರಕ್ಕೊಳಗಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಹಿಂದಿನ ಯುಪಿಎ ನೇತೃತ್ವದ ಕೇಂದ್ರ ಸರಕಾರ ಬಜೆಟ್‍ನಲ್ಲಿ ಇಟ್ಟಿದ್ದ ಹಣಕ್ಕಿಂತ ಶೇ.75ರಷ್ಟು ಹೆಚ್ಚು ಹಣವನ್ನು ಬಿಜೆಪಿ ಸರಕಾರ ಸಾವಯವ, ಪಾರಂಪರಿಕ ಕೃಷಿ ಪದ್ಧತಿಗೆ ಇಟ್ಟಿದೆ ಎಂದು ತಿಳಿಸಿದರು. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಾವಯವ ಹಾಗೂ ಜೈವಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಏಕೈಕ ರಾಷ್ಟ್ರವಾಗಿದ್ದು, ಇದಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ ಎಂದು ಅವರು ಶ್ಲಾಘಿಸಿದರು.

ವಿಶ್ವಕ್ಕೆ ಸಾವಯವ ಮತ್ತು ಪಾರಂಪರಿಕ ಕೃಷಿ ಪರಿಚಯ ಮಾಡಿಕೊಟ್ಟಿದ್ದೇ ಭಾರತ. ಪಾಶ್ಚಾತ್ಯರು ಲೇವಡಿ ಮಾಡುತ್ತಿದ್ದ ಸಾವಯವ ಕೃಷಿ ಇಂದು ವೈಜ್ಞಾನಿಕ ಕೃಷಿ ಪದ್ಧತಿಯಾಗಿ ರೂಪುಗೊಂಡಿದೆ ಎಂದು ಅವರು ವಿವರಿಸಿದರು.

ಮೋದಿ ಸರಕಾರದ ಮೂರೂವರೆ ವರ್ಷಗಳಲ್ಲಿ ಪಾರಂಪರಿಕ ಕೃಷಿ ವಿಕಾಸ ಯೋಜನೆಯಡಿ ಸುಮಾರು ಏಳೂವರೆ ಲಕ್ಷ ಎಕರೆ ಭೂಮಿಯನ್ನು ಪಾರಂಪರಾಗತ ಕೃಷಿ ಪದ್ಧತಿಗೆ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

ಆದಿವಾಸಿ, ಬುಡಕಟ್ಟು ಜನರಿರುವ ಗುಡ್ಡಗಾಡು ಪ್ರದೇಶಗಳನ್ನು ಸಾವಯವ ಕೃಷಿಗೆ ತರಲು ಕೇಂದ್ರ ಸರಕಾರ ಆದ್ಯತೆ ನೀಡಿದ್ದು, ಈ ನಿಟ್ಟಿನಲ್ಲಿ ಸಿಕ್ಕಿಂ ರಾಜ್ಯವನ್ನು ಸಂಪೂರ್ಣ ಸಾವಯವ ಕೃಷಿ ರಾಜ್ಯವನ್ನಾಗಿ ಮಾಡಲು ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ತನ್ನ ಸರಕಾರದ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲೂ ಸಾವಯವ ಕೃಷಿ ಜಾಗೃತಿ ಸಮಾವೇಶ ನಡೆಸಿದ್ದು, ಅದನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದರು.

ತನ್ನ ಸರಕಾರ ಜಾರಿಗೊಳಿಸಿದ್ದ ಮಹತ್ವಪೂರ್ಣ ಭಾಗ್ಯಲಕ್ಷ್ಮಿ ಯೋಜನೆಯ ಲಾಭವನ್ನು ಸುಮಾರು 18 ಲಕ್ಷ ಹೆಣ್ಣುಮಕ್ಕಳು ಪಡೆಯಲಿದ್ದಾರೆ. ಆದರೆ ಈ ಯೋಜನೆಯನ್ನು ಸಿದ್ದರಾಮಯ್ಯ ಸರಕಾರ ಸಮರ್ಪಕವಾಗಿ ಮುಂದುವರಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

ಈ ಬಾರಿ ಚುನಾವಣೆಯಲ್ಲಿ ರೈತರ ಪರವಾದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಾವಯವ ಮತ್ತು ನೀರಾವರಿ ಯೋಜನೆಗಳಿಗೆ ಬಿಜೆಪಿ ಸರಕಾರ ಆದ್ಯತೆ ನೀಡಲಿದೆ ಎಂದರು.

ಕಾವೇರಿ ನೀರಿನ ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ನಮಗೆ (ಕರ್ನಾಟಕ) ಶಕ್ತಿ ತುಂಬಿದೆ. ವಿವಾದ ಕೊನೆ ಮಾಡುವಲ್ಲಿ ಈ ತೀರ್ಪು ಅನುಕೂಲವಾಗಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪ್ಟರು.

ಕೇಂದ್ರ ಸಚಿವ ಅನಂತಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್, ಶಾಸಕ ಸಿ.ಟಿ.ರವಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News