×
Ad

ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ತರಬಹುದು ಎಂಬುವುದು ಸಿದ್ದಗಂಗಾ ಶ್ರೀಗಳ ನಂಬಿಕೆ: ಡಾ.ಜಿ.ಪರಮೇಶ್ವರ್

Update: 2018-04-01 19:09 IST

ತುಮಕೂರು.ಏ.01: ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆಗೆ ತರಬಹುದು ಎಂದು ಬಲವಾಗಿ ನಂಬಿರುವ ಸಿದ್ದಗಂಗಾ ಶ್ರೀಗಳು, ಆ ನಿಟ್ಟಿನಲ್ಲಿ ಬಹುದೂರ ಸಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸಿದ್ದಗಂಗಾಶ್ರೀಗಳು 111 ನೇ ಜನ್ಮ ಜಯಂತಿ ಅಂಗವಾಗಿ ಭಾನುವಾರ ಸಂಜೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಅಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಎಲ್ಲಾ ಸಮಸ್ಯೆಗಳ ಪರಿಹಾರದ ಕೀಲಿ ಕೈ ಎಂಬುದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಸ್ವಾಮೀಜಿಗಳು ನೂರಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ, ಲಕ್ಷಾಂತರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಇಂದು ದೇಶದಾದ್ಯಂತ ಹೆಸರು ವಾಸಿಯಾಗಿದ್ದಾರೆ. ಅಲ್ಲದೆ ಲಕ್ಷಾಂತರ ಜನರು ಧರ್ಮ ಮಾರ್ಗದಲ್ಲಿ ನಡೆಯಲು ಸಹಕಾರಿ ಯಾಗಿದ್ದಾರೆ. ಇವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬುದು ನಮ್ಮ ಬಹುದಿನದ ಕೋರಿಕೆ. ಈ ಹಿಂದೆ ಮನಮೋಹನ್‍ಸಿಂಗ್ ಪ್ರಧಾನಿಯಾಗಿದ್ದಾಗ ಹಾಗೂ ಹಾಲಿ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದ್ದೇನೆ. ಇಂದಲ್ಲ ನಾಳೆ ಅವರಿಗೆ ಈ ಪ್ರಶಸ್ತಿ ಲಭಿಸಲಿದೆ ಎಂಬ ವಿಶ್ವಾಸ ನಮ್ಮದು ಎಂದರು.

ಎಪ್ರಿಲ್ 3-4 ರಂದು ಕರ್ನಾಟಕಕ್ಕೆ ಮೂರನೇ ಸುತ್ತಿನ ಜನಾಶೀರ್ವಾದ ಯಾತ್ರೆಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಆಗಮಿಸಲಿದ್ದು, ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಎಪ್ರಿಲ್ 04 ರಂದು ಮಧ್ಯಾಹ್ನ 2:30ಕ್ಕೆ ತುಮಕೂರು ನಗರಕ್ಕೆ ಆಗಮಿಸುವ ರಾಹುಲ್‍ಗಾಂಧಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ನಂತರ ಕ್ಯಾತ್ಸಂದ್ರದಿಂದ ಕೆ.ಲಕ್ಕಪ್ಪ ಸರ್ಕಲ್‍ವರೆಗೆ ರೋಡ್ ಶೋ ನಡೆಸಲಿದ್ದು, ಈ ವೇಳೆ 5-10 ನಿಮಿಷ ಟೌನ್‍ಹಾಲ್ ವೃತ್ತದಲ್ಲಿ ಭಾಷಣ ಮಾಡಲಿದ್ದಾರೆ. ನಂತರ ಕುಣಿಗಲ್‍ಗೆ ತೆರಲಿದ್ದಾರೆ ಎಂದು ಪ್ರವಾಸದ ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News