ಶಿವಮೊಗ್ಗ: ಅನುಮತಿಯಿಲ್ಲದೆ ಕರಪತ್ರ ಹಂಚಿದ ಜೆಡಿಎಸ್ ಪಕ್ಷಕ್ಕೆ ನೋಟೀಸ್ ಜಾರಿ
Update: 2018-04-01 21:59 IST
ಶಿವಮೊಗ್ಗ, ಏ. 1: ಅನುಮತಿಯಿಲ್ಲದೆ ಕರಪತ್ರ ಮುದ್ರಿಸಿ ಹಂಚುವ ಮೂಲಕ ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಜಿಲ್ಲಾ ಚುನಾವಣಾ ನೋಡಲ್ ಅಧಿಕಾರಿಯು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಗೆ ಸಂಬಂಧಿಸಿದ ಯಾವುದೇ ಕರಪತ್ರ, ಜಾಹೀರಾತು ಪ್ರಕಟಿಸುವ ಪೂರ್ವದಲ್ಲಿ ಜಿಲ್ಲಾ ಮಟ್ಟದಲ್ಲಿರುವ ಮಾದರಿ ನೀತಿ ಸಂಹಿತೆ ತಂಡದಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ.
ಆದರೆ ಶನಿವಾರ ಜೆಡಿಎಸ್ ಪಕ್ಷದ ವತಿಯಿಂದ ಹಂಚಲಾಗಿರುವ ಕರಪತ್ರ ಮುದ್ರಣಕ್ಕೆ ಸಂಬಂಧಿಸಿದ ಮಾದರಿ ನೀತಿ ಸಂಹಿತೆ ತಂಡದಿಂದ ಯಾವುದೇ ಪೂರ್ವಾನುಮತಿ ಪಡೆದಿಲ್ಲ. ಈ ಕಾರಣದಿಂದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಿಗೆ ನೋಟೀಸ್ ಜಾರಿಗೊಳಿಸಲಾಗಿದೆ ಎಂದು ಆಯೋಗದ ಮೂಲಗಳು ಮಾಹಿತಿ ನೀಡಿವೆ.