ಪ್ರತಿಯೊಬ್ಬ ಮತದಾರನಿಗೂ ಇವಿಎಂ ಅರಿವು ಮೂಡಿಸಲಾಗುವುದು: ಚಿಕ್ಕಮಗಳೂರು ಜಿಲ್ಲಾಧಿಕಾರಿ
ಚಿಕ್ಕಮಗಳೂರು, ಎ.1: ಚುನಾವಣಾ ಆಯೋಗದ ನಿರ್ದೇಶನದಂತೆ ಇವಿಎಂ, ವಿವಿ ಪ್ಯಾಟ್ ಕುರಿತು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರತಿಯೊಬ್ಬ ಮತದಾರರಿಗೂ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದರು.
2018 ರ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಛೇರಿಯ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಬಳಕೆ ಕುರಿತು ನಡೆಸಿದ ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಮಾತನಾಡಿದರು.
ಮಾಧ್ಯಮ ಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಇವಿಎಂ ಹಾಗೂ ವಿವಿಪ್ಯಾಟ್ ಬಳಕೆ ಕುರಿತು ಸಾರ್ವಜನಿಕರಲ್ಲಿ ಗೊಂದಲ ನಿವಾರಿಸಿ, ಅರಿವು ಮೂಡಿಸಬೇಕು ಎಂದ ಅವರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಬಳಕೆಯ ಪ್ರಾತ್ಯಕ್ಷಿಕೆಯನ್ನು ನಡೆಸಿ ಮತದಾರರಲ್ಲಿ ಅರಿವು ಮೂಡಿಸಲಾಗುವುದು ಎಂದರು.
ಒಬ್ಬ ವ್ಯಕ್ತಿಗೆ ಒಂದು ಮತ ಚಲಾಯಿಸಲು ಅನುವಾಗುವಂತೆ ಇವಿಎಂ ಹಾಗೂ ವಿವಿಪ್ಯಾಟ್ ಕಾರ್ಯನಿರ್ವಹಿಸಲಿದ್ದು, ಮತಗಟ್ಟೆಯಲ್ಲಿ ನೇಮಿಸಲಾದ ಅಧಿಕಾರಿ ಕಂಟ್ರೋಲ್ ಯುನಿಟ್‍ನ್ನು ನಿಯಂತ್ರಿಸುತ್ತಿದ್ದು, ಮತದಾರ ಮತ ಚಲಾಯಿಸಿದ ಕೂಡಲೇ ವಿವಿ ಪ್ಯಾಟ್‍ನಲ್ಲಿ ತಾವು ಮತದಾನ ನೀಡಿರುವುದರ ಕುರಿತು ಡಿಸ್‍ಪ್ಲೇನಲ್ಲಿ ಖಾತ್ರಿಪಡಿಸಿಕೊಳ್ಳಬಹುದಾಗಿದ್ದು, ಇದು 7 ಸೆಕೆಂಡ್‍ವರೆಗೆ ಕಂಡುಬರುತ್ತದೆ, ನಂತರ ಮತ ಖಾತ್ರಿ ಚೀಟಿ ವಿವಿ ಪ್ಯಾಟ್ ಒಳಗೆ ರಕ್ಷಿಸಲ್ಪಟ್ಟಿರುತ್ತದೆ ಎಂದರು.
ಮತ ಯಂತ್ರಗಳು ಸುಸ್ಥಿತಿಯಲ್ಲಿರುವುದರ ಕುರಿತು ಮೊದಲಿಗೆ ವಿವಿಪ್ಯಾಟ್‍ನಲ್ಲಿ 7 ಖಾತ್ರಿ ಚೀಟಿಗಳು ದೊರೆಯಲಿದ್ದು, ನಂತರ ಮತದಾನ ಪ್ರಾರಂಭವಾಗುತ್ತದೆ. ಒಂದು ಮತ ಚಲಾವಣೆಯಾದ 22 ಸೆಕೆಂಡ್ ನಂತರ ಮತ್ತೊಂದು ಮತ ಚಲಾವಣೆಗೆ ಕಂಟ್ರೋಲ್ ಯೂನಿಟ್‍ನಿಂದ ಅನುಮತಿ ದೊರೆಯಲಿದೆ ಎಂದ ಅವರು ವಿವಿ ಪ್ಯಾಟ್‍ನಲ್ಲಿ 1,500 ಮತ ಖಾತ್ರಿ ಚೀಟಿಗಳು ಇರಲಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕುಮಾರ ಇ.ವಿ.ಎಂ ಹಾಗೂ ವಿವಿಪ್ಯಾಟ್ ಬಳಕೆ ಮತ್ತು ಅದರ ಕಾರ್ಯನಿರ್ವಹಣೆಯ ಕುರಿತು ಸಂಪೂರ್ಣ ವಿವರ ನೀಡಿದರು.
ಮಧ್ಯಾಹ್ನ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಮತ್ತು ಕಾರ್ಯಕರ್ತರಿಗೆ ಇವಿಎಂ ಮತ್ತು ವಿವಿ ಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ.ಸತ್ಯಭಾಮ, ರಾಜಕೀಯ ಮುಖಂಡರು, ಕಾರ್ಯಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು.