ಮಡಿಕೇರಿ: ಅಲ್ ಅಮೀನ್ ಸಂಸ್ಥೆಯಿಂದ ಉಚಿತ ಸಾಮೂಹಿಕ ವಿವಾಹ
ಮಡಿಕೇರಿ, ಏ.1: ಕಳೆದ 15 ವರ್ಷಗಳಿಂದ ಬಡ ಮುಸ್ಲಿಂ ಯುವತಿಯರ ಸಾಮೂಹಿಕ ವಿವಾಹವನ್ನು ನಡೆಸಿಕೊಂಡು ಬರುತ್ತಿರುವ ಅಲ್ ಅಮೀನ್ ಸಂಸ್ಥೆ ಈ ಬಾರಿ ಕೂಡ ವಿವಾಹ ಸಮಾರಂಭವನ್ನು ಅರ್ಥಪೂರ್ಣಗೊಳಿಸಿತು. ನಗರದ ಕಾವೇರಿ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ 15 ಬಡ ಯುವತಿಯರು ನವ ಜೀವನಕ್ಕೆ ಕಾಲಿರಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಧರ್ಮಗುರುಗಳಾದ ಇಲ್ಯಾಸ್ ತಂಙಳ್, ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ವರದಕ್ಷಿಣೆ ಪದ್ದತಿಯನ್ನು ಹೋಗಲಾಡಿಸಲು ಎಲ್ಲರು ಕೈಜೋಡಿಸಬೇಕೆಂದರು. ಬಡ ಯುವತಿಯರಿಗೆ ಕಂಕಣ ಭಾಗ್ಯ ಕಲ್ಪಿಸುವ ಮೂಲಕ ಅಲ್ ಅಮಿನ್ ಸಂಸ್ಥೆ ಪುಣ್ಯದ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಎಫ್.ಎ.ಮೊಹಮದ್ ಹಾಜಿ, ಈ ಬಾರಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಿದ್ದು, 15 ಅರ್ಹ ಅರ್ಜಿಗಳನ್ನು ಕ್ರಮಬದ್ದವಾಗಿ ಸ್ವೀಕರಿಸಿ ವಧು ವರರನ್ನು ಆಯ್ಕೆ ಮಾಡಲಾಗಿದೆ ಎಂದರು.
ದಾನಿಗಳ ಸಹಕಾರದಿಂದ ಕೊಡಗಿನ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಕನ್ಯೆಯರ ವಿವಾಹವನ್ನು ಕಳೆದ 15 ವರ್ಷಗಳಿಂದ ಉಚಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅಲ್ ಅಮೀನ್ ಸಮಿತಿ ಇದುವರೆಗೆ 317 ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ವಿವಾಹವನ್ನು ನಡೆಸಿಕೊಂಡು ಬಂದಿದ್ದು, ಇನ್ನು ಮುಂದೆಯೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು. ವರದಕ್ಷಿಣೆ ಪಿಡುಗಿನ ಬಗ್ಗೆ ಸಮಾಜ ಜಾಗೃತವಾಗಬೇಕಾಗಿದೆ ಎಂದು ಎಫ್.ಎ.ಮೊಹಮದ್ ಹಾಜಿ ತಿಳಿಸಿದರು.
ವಿವಾಹದಲ್ಲಿ ವಧುವಿಗೆ ತಲಾ 5 ಪವನ್ ಚಿನ್ನದ ಆಭರಣ ಹಾಗೂ ವಧು ವರರಿಗೆ ಉಡುಪು ಮತ್ತು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ವಿವಿಧ ಧರ್ಮಗುರುಗಳು, ದಾನಿಗಳು ಹಾಗೂ ಸಾರ್ವಜನಿಕರು ಉಚಿತ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದರು.