×
Ad

ಕೋಮುವಾದ ನಿರ್ಮೂಲನೆಗೆ ಪ್ರತಿಯೊಬ್ಬರು ಪಣತೊಡಬೇಕು: ಡಾ.ಜಾವೀದ್ ಜಮಾದಾರ್

Update: 2018-04-02 18:19 IST

ವಿಜಯಪುರ, ಎ.2: ಜಾತಿ, ಮತ, ಪಂಥ ಭಾವನೆ ಮನೆಗೆ ಸೀಮಿತಗೊಳಿಸಿ. ದೇಶಕ್ಕೆ ಹಾಗೂ ಸಮಾಜಕ್ಕೆ ಅಗತ್ಯವಾಗಿರುವ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸ್ನೇಹ, ಪ್ರೀತಿ, ಬಾತೃತ್ವ ಭಾವನೆ ಬೆಳೆಸುವ ಕೆಲಸ ಮಾಡಬೇಕಾಗಿದೆ. ಕೋಮವಾದ ನಿರ್ಮೂಲನೆಗಾಗಿ ಪ್ರತಿಯೊಬ್ಬರು ಪಣತೊಡಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಷನ್ ರಾಷ್ಟ್ರೀಯಾಧ್ಯಕ್ಷ ಡಾ.ಜಾವೀದ್ ಜಮಾದಾರ್ ಕರೆ ನೀಡಿದ್ದಾರೆ.

ಸೋಮವಾರ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ, ಕ್ರೀಡಾ ಇಲಾಖೆ ಎನ್ನೆಸೆಸ್ ಕೋಶದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಿಳೆಯರ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ಐಕ್ಯತಾ ಶಿಬಿರಗಳು ದೇಶದ ಸರ್ವಾಂಗೀಣ ವಿಕಾಸಕ್ಕೆ ಮಂದಿರಗಳಾಗಲಿ. ತನ್ಮೂಲಕ ವಿದ್ಯಾರ್ಥಿಗಳು ಸಮಾಜ ಮತ್ತು ಸಮುದಾಯದ ಜನರನ್ನು ಒಗ್ಗೂಡಿಸಿ ದೇಶ ಕಟ್ಟುವ ಭಾಷೆಗಳನ್ನು ಬೆಸೆಯುವ ಭಾವನಾತ್ಮಕ ಭಾವನೆಗಳನ್ನು ಜನರಲ್ಲಿ ಬೆಳೆಸಬೇಕು ಎಂದು ಅವರುಸಲಹೆ ನೀಡಿದರು.

ರಾಷ್ಟ್ರೀಯ ಏಕತಾ ಶಿಬಿರಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳುವ ಮೂಲಕ ಯುವ ಜನತೆಯಲ್ಲಿ ರಾಷ್ಟ್ರ ಕಟ್ಟುವ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಎಂದು ಧಾರವಾಡ ನೀರು ಮತ್ತು ಭೂ ಸಂರಕ್ಷಣಾ ಸಂಸ್ಥೆ ನಿರ್ದೇಶಕ ರಾಜೇಂದ್ರ ಪೊದ್ದಾರ್ ಅಭಿಪ್ರಾಯಪಟ್ಟರು.

ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಬೌದ್ಧಿಕ, ಶಾರೀರಿಕ ಹಾಗೂ ಮಾನಸಿಕ ಸದೃಡತೆ ತಂದುಕೊಂಡು ಆದರ್ಶ ರಾಷ್ಟ್ರ ಕಟ್ಟಲು ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಕೋಮು ಭಾವನೆಗಳಿಗೆ ತುತ್ತಾಗದೆ ಸಹಬಾಳ್ವೆಯ ಜೀವನ ಸಾಗಿಸಬೇಕು. ವಿಜಯಪುರದ ಅರಸ ಆದಿಲ್‌ಶಾ ಜಗದ್ಗುರು ಖ್ಯಾತಿಯನ್ನು ಹೊಂದಿದ್ದರು. ಇದು ಭಾವೈಕ್ಯತೆಯ ಪ್ರತೀಕ ಎಂದು ರಾಜೇಂದ್ರ ಪೊದ್ದಾರ ಇದೇ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಿ ಹಣಕಾಸು ಅಧಿಕಾರಿ ಪ್ರೊ.ಆರ್.ಸುನಂದಮ್ಮ, ಕುಲಸಚಿವ ಎಲ್.ಆರ್. ನಾಯಕ, ಡಾ.ನಾಗರಾಜ, ಡಾ.ಭಾಗ್ಯಶ್ರೀ ದೊಡ್ಡಮನಿ ಹಾಗೂ ಒಂಬತ್ತು ರಾಜ್ಯದ ಕಾರ್ಯಕ್ರಮಾಧಿಕಾರಿಗಳು ಉಪಸ್ಥಿತರಿದ್ದರು. ಎನ್ನೆಸೆಸ್ ಮಹಿಳಾ ಸ್ವಯಂ ಸೇವಕಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ವಿವಿಧ ರಾಜ್ಯಗಳ ತಂಡಕ್ಕೆ ಓರ್ವ ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಅತ್ಯುತ್ತಮ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಪ್ರಶಸ್ತಿಯನ್ನು ಓಡಿಸಾ ತಂಡ ಪ್ರಥಮ ಸ್ಥಾನ, ಗುಜರಾತ್ ಮತ್ತು ಆಂಧ್ರಪ್ರದೇಶ ದ್ವಿತೀಯ ಸ್ಥಾನ, ಮಹಾರಾಷ್ಟ್ರ ತೃತೀಯ ಸ್ಥಾನ ಪಡೆಯಿತು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News