ವರುಣಾ ಕ್ಷೇತ್ರಕ್ಕೆ ಆಗಮಿಸಿದ ವಿಜಯೇಂದ್ರ: ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆ
ಮೈಸೂರು,ಏ.2: ಮೈಸೂರಿಗೆ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೆಂದು ಬಿಂಬಿಸಲಾಗುತ್ತಿರುವ ಯಡಿಯೂರಪ್ಪ ಅವರು ಪುತ್ರ ಬಿ.ವೈ ವಿಜಯೇಂದ್ರ ಆಗಮಿಸಿ ಸಭೆ ನಡೆಸಿದರು.
ವರುಣ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದ್ದಾರೆ. ಹಾರ ಹಾಕಿ ಶಾಲು ಹೊದಿಸಿ ಪೇಟ ತೊಡಿಸಿ ಸ್ವಾಗತ ಕೋರಿದ್ದು, ಮೈಸೂರಿನ ಚಿಕ್ಕಳ್ಳಿ ಬಳಿ ಕಾರ್ಯಕರ್ತರು ಬಿ.ವೈ.ವಿಜಯೇಂದ್ರ ಅವರನ್ನು ಬರ ಮಾಡಿಕೊಂಡರು. ನಂತರ ಚಾಮುಂಡಿಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಚಿಕ್ಕಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ ಒಗ್ಗೂಡಿ ಕೆಲಸ ಮಾಡುತ್ತೇವೆ. ನನ್ನ ತಂದೆಯವರ ಜತೆ ಕಳೆದ ಹತ್ತು ವರ್ಷಗಳಿಂದ ರಾಜಕೀಯವನ್ನು ಹತ್ತಿರದಿಂದ ನೋಡಿದ್ದೇನೆ. ಹಾಗಾಗಿ ನೀವುಗಳು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಹೇಳಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಣ್ಣ ರಾಘವೇಂದ್ರ ಶಿವಮೊಗ್ಗದಲ್ಲಿ ಮಾಜಿ ಸಿಎಂ ವಿರುದ್ಧ ನಿಂತು ಎಂ.ಪಿ ಯಾಗಿದ್ದರು. 150 ಸೀಟ್ ಗೆಲ್ಲುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೊಂದೇ ನಮ್ಮ ಉದ್ದೇಶ. ಯಾರು ಎಲ್ಲಿ ಸ್ಪರ್ಧಿಸುತ್ತಾರೆ ಅನ್ನೋದು ಮುಖ್ಯವಲ್ಲ. ಈ ಬಾರಿ ವರುಣದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಅವರ ನಿವಾಸಕ್ಕೆ ತೆರಳಿ ಉಭಯ ಕುಶಲೋಪರಿ ವಿಚಾರಿಸಿ ಪಕ್ಷ ಸಂಘಟನೆಯ ಕುರಿತು ಚರ್ಚಿಸಿದರು.