ಶಿವಮೊಗ್ಗ: ಅಪ್ರಾಪ್ತೆ ಮೇಲೆ ಅತ್ಯಾಚಾರ; ಆರೋಪಿಯ ಬಂಧನ
Update: 2018-04-02 22:08 IST
ಶಿವಮೊಗ್ಗ, ಏ. 2: ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿಯ ಚೆನ್ನಗೊಂಡ ಗ್ರಾಮದಲ್ಲಿ ನಡೆದಿದೆ.
ಬೆಳ್ಳೋಡಿ ಗ್ರಾಮದ ನಿವಾಸಿ ಧನಂಜಯ (22) ಆರೋಪಿಯಾಗಿದ್ದಾನೆ. ಈತ ಬಾಲಕಿಗೆ ಮೊದಲೇ ಪರಿಚಯವಿದ್ದು, ಭಾನುವಾರ ಈತ ಬಾಲಕಿಯ ಮನೆಗೆ ಆಗಮಿಸಿದ್ದಾನೆ. ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಅತ್ಯಾಚಾರ ಎಸಗಿ, ಈ ವಿಷಯ ಯಾರಿಗೂ ತಿಳಿಸದಂತೆ ಬಾಲಕಿಗೆ ಜೀವ ಬೆದರಿಕೆ ಹಾಕಿ ಹಿಂದಿರುಗಿದ್ದ ಎಂದು ಆರೋಪಿಸಲಾಗಿದೆ.
ನಂತರ ಬಾಲಕಿಯು ತನ್ನ ಮನೆಯವರಿಗೆ ವಿಷಯ ತಿಳಿಸಿದ್ದಳು. ಈ ಕುರಿತಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಇದರ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.